ಹೊಸತು ವಾರ ಪತ್ರಿಕೆ ಸಂಪಾದಕ ಡಾ. ಸಿದ್ಧನಗೌಡ ಪಾಟೀಲ್ ಬಣ್ಣನೆ
ದಾವಣಗೆರೆ, ಅ. 2- ರಾಜ್ಯದ ರೈತರು, ಕಾರ್ಮಿಕರು, ಬಡವರು, ಶೋಷಿತರ ಪರವಾಗಿ ಹೋರಾಟ ಮಾಡಿದ ಅಪ್ರತಿಮ ಕಾರ್ಮಿಕ ಮುಖಂಡ ದಿವಂಗತ ಪಂಪಾಪತಿ ಕೇವಲ ವ್ಯಕ್ತಿ ಆಗಿರಲಿಲ್ಲ, ಬೆವರಿನ ಸಂಕೇತವಾಗಿದ್ದರು ಎಂದು ಹೊಸತು ವಾರ ಪತ್ರಿಕೆ ಸಂಪಾದಕ ಡಾ. ಸಿದ್ಧನಗೌಡ ಪಾಟೀಲ್ ಬಣ್ಣಿಸಿದರು.
ನಗರದ ಕಾಂ. ಪಂಪಾಪತಿ ಭವನದಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಇಂದು ಅಯೋಜಿಸಲಾಗಿದ್ದ ನಗರದ ಕೆ.ಎಸ್.ಆರ್.ಟಿ.ಸಿ. ನೂತನ ಬಸ್ ನಿಲ್ದಾಣಕ್ಕೆ ಕಾಂ.ಪಂಪಾಪತಿ ಹೆಸರಿಡುವ ಬಗ್ಗೆ ಚಿಂತನ-ಮಂಥನ ಸಭೆಯನ್ನು ತಮಟೆ ಭಾರಿಸುವ ಮೂಲಕ ಉದ್ಘಾಟಿಸಿದರು.
ನಗರಸಭೆ ಅಧ್ಯಕ್ಷರಾಗಿ, ಶಾಸಕರಾಗಿದ್ದ ಪಂಪಾಪತಿ, ದಾವಣಗೆರೆ ಮಾತ್ರವಲ್ಲದೇ ರಾಜ್ಯಮಟ್ಟದಲ್ಲಿ ಶೋಷಿತರ ಪರವಾಗಿ ಹೋರಾಟ ನಡೆಸಿದರು. ಕ್ಷೇತ್ರದಾದ್ಯಂತ ಅವರೇ ಓಡಾಡಿ ಸಮಸ್ಯೆಗಳನ್ನು ಅರಿತು ಪರಿಹಾರ ಕಂಡು ಕೊಳ್ಳುತ್ತಿದ್ದರು. ಅಲ್ಲದೇ ದಾವಣಗೆರೆ ನಗರದ ಹಸಿರೀಕರಣಕ್ಕೆ ಸಾಕ್ಷಿಯಾಗಿದ್ದರು. ಇದಲ್ಲದೇ ಪಂಪಾಪತಿ ಅವರು ದಾವಣಗೆರೆ ಮಹಾನಗರದ ಅಭಿವೃದ್ದಿಗಾಗಿ ಶ್ರಮಿಸಿದ್ದು, ನಗರದಲ್ಲಿ ನೂತ ನವಾಗಿ ನಿರ್ಮಾಣ ಆಗುತ್ತಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಕಾಂ.ಪಂಪಾಪತಿ ಹೆಸರಿಡುವುದು ಸೂಕ್ತ ಎಂದರು.
ಸ್ಮಾರ್ಟ್ಸಿಟಿಗಳೆಂದರೆ ಸುಂದರ ನಗರ ಎಂದರ್ಥ. ಹಾಗೆಂದ ಮಾತ್ರಕ್ಕೆ ಶ್ರೀಮಂತರನ್ನು ನೋಡಿ ಸುಂದರ ನಗರ ಎನ್ನುವುದಿಲ್ಲ. ಅಲ್ಲಿನ ಬದುಕನ್ನು ನೋಡಿ ಅಳೆಯಲಾಗುತ್ತದೆ. ಈ ನಿಟ್ಟಿನಲ್ಲಿ ಕೇವಲ ನಗರವನ್ನು ಸ್ವಚ್ಚ ಮಾಡುವ ಬದಲು ಮನಸ್ಸನ್ನು ಸ್ವಚ್ಛವಾಗಿ ಇಟ್ಟುಕೊಂಡು ಸಮಾಜವನ್ನು ಕಟ್ಟಬೇಕಾಗಿದೆ ಎಂದರು.
ಮಹಾತ್ಮ ಗಾಂಧೀಜೀಯವರಿಗೆ ಹಿಂದುತ್ವದಲ್ಲಿ ನಂಬಿಕೆ ಇತ್ತು. ಆದರೆ ಯಾವುದೇ ಒಂದು ಜಾತಿಯ ಮೇಲಲ್ಲ. ಅಲ್ಲ ದೇ ಯಾವುದೇ ಒಂದು ಜಾತಿ, ಧರ್ಮವನ್ನು ಪ್ರತ್ಯೇಕವಾಗಿ ಅಳೆಯಬಾರದು.
ಸರ್ವರನ್ನೂ ಒಂದೇ ರೀತಿಯಲ್ಲಿ ನೋಡಬೇಕೆನ್ನುವುದೇ ಅವರ ಆಶಯವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಧರ್ಮ, ಜಾತಿ ಆಧಾರದ ಮೇಲೆ ಕಂದಕ ಸೃಷ್ಠಿ ಮಾಡಲಾಗುತ್ತಿದೆ. ಈ ರೀತಿಯಾದರೆ ಯಾವ ದೇಶವೂ ಉದ್ಧಾರ ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಉಮೇಶ್ ಆವರಗೆರೆ ಮಾತನಾಡಿ, ಭ್ರಷ್ಟಾಚಾರ, ನಿರುದ್ಯೋಗ ರಾಜ್ಯ, ದೇಶದೆಲ್ಲೆಡೆ ತಾಂಡವ ನಡೆಸುತ್ತಿದೆ. ಕಲಿತ ವಿದ್ಯಾವಂತರು ಕೆಲಸ ಹುಡುಕಿದರೂ ಸಿಗದಂತಹ ಪರಿಸ್ಥಿತಿ ಎದುರಾಗಿದೆ. ನಮ್ಮನ್ನು ಆಳುವ ಸರ್ಕಾರಗಳು ಶ್ರಮಿಕರ ಪರವಾಗಿ ಕೆಲಸ ಮಾಡದೇ ನಿರ್ಲಕ್ಷ್ಯ ವಹಿಸುತ್ತಿವೆ. ರಾಜಕಾರಣಿಗಳಲ್ಲಿ ಸ್ವಪ್ರತಿಷ್ಠೆಗಾಗಿ ಸ್ವಾರ್ಥ ಮನೋಭಾವ ಬಂದಿದೆ ಎಂದು ಕಿಡಿಕಾರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಕೆ.ರಾಘವೇಂದ್ರ ನಾಯರಿ ವಹಿಸಿದ್ದರು. ಈ ವೇಳೆ ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಬಿ.ರಾಮಚಂದ್ರಪ್ಪ, ಜನಶಕ್ತಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸತೀಶ್ ಅರವಿಂದ್, ಶ್ರೀ ಆಂಜನೇಯ ಕಾಟನ್ ಮಿಲ್ಸ್ ವರ್ಕರ್ ಯೂನಿಯನ್ ಪ್ರಧಾನ ಕಾರ್ಯ ದರ್ಶಿ ಎಸ್.ಜಯ್ಯಪ್ಪ, ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ವಿ.ಲಕ್ಷ್ಮಣ, ಎಐಟಿಯುಸಿ ತಾಲ್ಲೂಕು ಅಧ್ಯಕ್ಷ ನರೇಗ ರಂಗನಾಥ, ನೇತ್ರಾವತಿ, ಶಿವಕುಮಾರ್ ಡಿ.ಶೆಟ್ಟರ್, ಸಾಮಿಲ್ ದಾದಾಪೀರ್, ಎ.ತಿಪ್ಪೇಶಿ, ಹೆಚ್.ಕೆ.ಆರ್.ಸುರೇಶ್, ಎಸ್.ಮುರುಗೇಶ್, ಗುಡಿಹಳ್ಳಿ ಹಾಲೇಶ್, ರಾಜು ಕೆರನಹಳ್ಳಿ ಹಾಗು ಇತರರು ಇದ್ದರು.