ಸಂವಿಧಾನದ ಆಶಯಗಳನ್ನು ಪಾಲಿಸುವ ಏಕೈಕ ಪಕ್ಷ ಕಾಂಗ್ರೆಸ್

ಸಂವಿಧಾನದ ಆಶಯಗಳನ್ನು ಪಾಲಿಸುವ ಏಕೈಕ ಪಕ್ಷ ಕಾಂಗ್ರೆಸ್

ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ

ಹೊನ್ನಾಳಿ, ಸೆ.21- ಸಂವಿಧಾನದ ಆಶಯ ಗಳನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರವು ಸಂವಿಧಾನ ಪೀಠಿಕೆ  ವಾಚನದ ಮೂಲಕ  ಹೊಸ ಇತಿಹಾಸ ಸೃಷ್ಟಿಸಿದೆ,  ಸಂವಿಧಾನದ ಆಶಯ ಗಳನ್ನು ಪಾಲಿಸುವ ಏಕೈಕ ಪಕ್ಷ ಕಾಂಗ್ರೆಸ್  ಆಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ತಿಳಿಸಿದರು.

ಪಟ್ಟಣದ ಖಾಸಗಿ ಬಸ್ ಬಸ್ ನಿಲ್ದಾಣ ದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸರ್ಕಾರವು ಸಂವಿಧಾನದ ಆಶಯಗಳನ್ನು ಅನುಷ್ಠಾನಗೊಳಿಸುವ ಉದಾತ್ತ ಉದ್ದೇಶವನ್ನು ಹೊಂದಿದ್ದು ಎಲ್ಲರಿಗೂ ಸಮಾನ ಹಕ್ಕು, ಸ್ತ್ರೀ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯ ಉಲ್ಲಂಘನೆಯಾಗದ ರೀತಿಯಲ್ಲಿ  ಕೆಲಸ  ಮಾಡುತ್ತಿದೆ ಎಂದು ತಿಳಿಸಿದರು.  

ಪ್ರಜಾಪ್ರಭುತ್ವದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದು. ಸಂವಿಧಾನವನ್ನು ಪ್ರತಿಯೋರ್ವ ವಿದ್ಯಾರ್ಥಿ ಓದಿ ಕಾಯಾ-ವಾಚಾ-ಮನಸಾ ಅದನ್ನು ಅನುಸರಿಸಬೇಕು. ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕ ವರ್ಗವು ವಿಶೇಷ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತವು ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೂ ಸಂವಿಧಾನದ ಆಧಾರದ ಮೇಲೆ ಮಾರ್ಗದರ್ಶನ ನೀಡುತ್ತಿರುವ ಮಾದರಿ ರಾಷ್ಟ್ರವಾಗಿದೆ ಎಂದು ಬಣ್ಣಿಸಿದರು. 

ಸಂವಿಧಾನವನ್ನು ಓದಿದ ಯುವಕರು ಪ್ರಜಾ ಪ್ರಭುತ್ವದಲ್ಲಿ ದೊರಕಬಹುದಾದ ಅವಕಾಶಗಳನ್ನು ಉಪಯೋಗಿಸಿಕೊಂಡರೆ ಭಾರತವನ್ನು ಜಗತ್ತು ಗ್ರಹಿಸುವ ವಿಧಾನವನ್ನು ಬದಲಾಯಿಸುತ್ತದೆ ಮತ್ತು ಭಾರತೀಯ ಪ್ರಜಾಪ್ರಭುತ್ವದಲ್ಲಿ ಹೊಸ ನಾಯಕತ್ವ, ಹೊಸ ಸ್ಥಿರತೆ ಮತ್ತು ಉಲ್ಲಾಸಕರ ಬದಲಾವಣೆ ತರಲು ಸಹಕಾರಿಯಾಗಲಿದೆ ಎಂದು ವಿವರಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ.ಜಿ.ಧನಂಜಯ ಅವರು ನೆರೆದಿದ್ದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಂವಿಧಾನದ ಪೀಠಿಕೆಯನ್ನು ವಾಚನ ಮಾಡಿಸಿದರು.

ತಹಶೀಲ್ದಾರ್ ಪುಟ್ಟರಾಜೇಗೌಡ, ತಾಲ್ಲೂಕ್ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ರಾಘವೇಂದ್ರ, ಸಮಾಜ ಕಲ್ಯಾಣಾಧಿಕಾರಿ ಎಚ್.ಎಲ್.ಉಮಾ, ಟಿ.ಎಚ್.ಒ.ಕೆಂಚಪ್ಪ ಆರ್ ಬಂತಿ, ಪೊಲೀಸ್ ಇನ್ಸ್‍ಪೆಕ್ಟರ್ ಸಿದ್ದೇಗೌಡ,  ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರತಿಮಾ, ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕಿ ರೇಖಾ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಕೆ.ಆರ್.ರುದ್ರಪ್ಪ, ಪುರಸಭಾ ಮುಖ್ಯಾಧಿಕಾರಿ ಎಚ್.ನಿರಂಜನಿ, ಮುಖಂಡರಾದ ಎಚ್.ಎ.ಉಮಾಪತಿ, ದಿಡಗೂರು ತಮ್ಮಣ್ಣ, ದಿಡಗೂರು ಎ.ಜಿ.ಪ್ರಕಾಶ್, ಆರ್.ನಾಗಪ್ಪ, ಕ್ಯಾಸಿನಕೆರೆ ಶೇಖರಪ್ಪ, ಚಂದಪ್ಪ, ವರದರಾಜಪ್ಪ ಗೌಡ್ರು ಮತ್ತಿತರರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣಾಧಿಕಾರಿ ಕೆ.ಎಸ್.ಈಶ್ವರಪ್ಪ ನಿರೂಪಿಸಿ, ಬಿಇಒ ಎಸ್.ಸಿ.ನಂಜರಾಜ್ ಸ್ವಾಗತಿಸಿ, ಬಿಆರ್‍ಸಿ ತಿಪ್ಪೇಶಪ್ಪ ವಂದಿಸಿದರು.

error: Content is protected !!