ಮಾನ್ಯರೇ,
ದಿನನಿತ್ಯವೂ ಎಂದಿನಂತೆ ಸ್ವಾತಂತ್ರ್ಯ ದಿನಾಚರಣೆಯಂದು ಬೆಳಗಿನ ಜಾವ ವಾಕಿಂಗ್ ಹೋಗಿದ್ದ ಸಂದರ್ಭದಲ್ಲಿ, ಅಲ್ಲಿಯೇ ಸಮೀಪದಲ್ಲಿದ್ದ ಖಾಸಗಿ ಶಾಲಾ ಶಿಕ್ಷಕಿಯೊಬ್ಬರು ಹಿಂದಿಯಲ್ಲಿ ಸ್ವಾತಂತ್ರ್ಯ ದಿವಸದ ಹೋರಾಟದ ಹಿನ್ನೆಲೆಯ ಕುರಿತು ಭಾಷಣ ಮಾಡುತ್ತಿದ್ದರು. ಹಾಗೆಯೇ ಕುತೂಹಲಕ್ಕೆ ನನಗನಿಸಿದ್ದು ಮಾತೃಭಾಷೆಯಾದ ನಮ್ಮ ಕನ್ನಡದಲ್ಲಿಯೇ ಭಾಷಣ ಮಾಡಬಹುದಿತ್ತಲ್ಲವೇ? ಕೇಳುವುದಕ್ಕೂ ಕೂಡ ಹಿತವೆನಿಸುತ್ತಿತ್ತು. ಅಲ್ಲಿ ನೆರೆದಿರುವವರಿಗೆ ಹಿಂದಿ ಬರದಿದ್ದರೆ, ಅವರ ಮಾತುಗಳು ಅರ್ಥವಾಗುವುದಾದರೂ ಹೇಗೆ? ಭಾಷಣವೂ ವ್ಯರ್ಥ.
ಹಾಗೆಯೇ ನನ್ನ ಸ್ನೇಹಿತನ ಮಗನೊಬ್ಬನ ವಿಡಿಯೋ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದೆ, ಅಲ್ಲಿಯೂ ಕೂಡ ಆರೇಳು ವರ್ಷದ ಆ ಪುಟ್ಟ ಬಾಲಕನಿಂದಲೂ ಇಂಗ್ಲಿಷ್ ನಿಂದ ಭಾಷಣ ಮಾಡಿಸುತ್ತಿದ್ದರು. ಇವೆಲ್ಲ ಸಂಗತಿಗಳನ್ನು ನೋಡಿದರೆ ಇಲ್ಲಿಯೇ ಹುಟ್ಟಿ ಬೆಳೆದು, ಕನ್ನಡಿಗರೇ ಆಗಿದ್ದರೂ ಕೂಡ ಪರಭಾಷೆ ಮೇಲೆ ವ್ಯಾಮೋಹ ತುಸು ಜಾಸ್ತಿಯೇ ಎನಿಸುತ್ತದೆ. ಇಂತಹ ಪರಭಾಷಾ ವ್ಯಾಮೋಹದ ಸಂಗತಿಗಳು ತಮ್ಮ ಶಾಲೆಯ ಪ್ರತಿಷ್ಠೆಗಾಗಿಯೋ ಅಥವಾ ತೋರ್ಪಡಿಕೆಗಾದರೂ ಇರಬಹುದು. ನಮ್ಮ ಭಾಷೆಯನ್ನು ಉಳಿಸಿ, ಬೆಳೆಸಬೇಕಾದವರೇ ಚಿವುಟಿ ಹಾಕುತ್ತಿರುವುದು ನಿಜಕ್ಕೂ ದುರಂತ.
– ಮುರುಗೇಶ ಡಿ., ದಾವಣಗೆರೆ.