ಕೊಟ್ಟೂರು, ಏ. 16 – ಉಜ್ಜಿನಿ ರಥೋತ್ಸವದ ಸಂದರ್ಭದಲ್ಲಿ ಇಲಾಖಾಧಿಕಾರಿಗಳಿಗೆ ವಹಿಸಿದ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ತಹಶೀಲ್ದಾರ್ ಎಂ.ಕುಮಾರಸ್ವಾಮಿ ತಿಳಿಸಿದರು.
ತಾಲ್ಲೂಕಿನ ಉಜ್ಜಿಯಿನಿ ಪೀಠದಲ್ಲಿ ಇದೇ ದಿನಾಂಕ 25 ರ ಮಂಗಳವಾರ ಜರುಗಲಿರುವ ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ರಥೋತ್ಸವ ಹಾಗೂ 26 ರಂದು ಶಿಖರ ತೈಲಾಭಿಷೇಕ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಾತ್ರಾ ಸಂದರ್ಭದಲ್ಲಿ ಮೂಲ ಸೌಕರ್ಯಗಳ ಕೊರತೆ ಕಂಡಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳೇ ಹೊಣೆಯಾಗುತ್ತಾರೆ ಎಂದರು.
ಗ್ರಾಮದಲ್ಲಿ ಸ್ವಚ್ಚತೆ, ಬೀದಿ ದೀಪಗಳು ಹಾಗೂ ನೀರಿನ ಪೂರೈಕೆ, ಫಾಗಿಂಗ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಿ.ಎಚ್.ಎಂ.ಗಂಗಾ ಧರಯ್ಯ ಇವರಿಗೆ ಸೂಚಿಸಿದರು. ನಿರಂತರ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಜೆಸ್ಕಾಂ ಅಧಿಕಾರಿಗೆ ಸೂಚಿಸಿದರು. ಸುತ್ತಮುತ್ತಲಿನ ಪಟ್ಟಣಗಳಿಂದ ವಿಶೇಷ ಬಸ್ಸುಗಳ ವ್ಯವಸ್ಥೆ ಹಾಗೂ ಗ್ರಾಮದ ಹೊರವಲಯಗಳಲ್ಲಿ ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ತೆರೆಯುವಂತೆ ಆದೇಶಿಸಿದರು. ಔಷಧಿಗಳ ದಾಸ್ತಾನು ಮಾಡಿಕೊಳ್ಳು ವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ಇಲಾಖಾಧಿ ಕಾರಿಗೆ ಸೂಚಿಸಿದರು.
ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಮಾತನಾಡಿ, ರಥೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಬಂದೋಬಸ್ತಿಗಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಿಪಿಐ ವೆಂಕಟಸ್ವಾಮಿ, ಪಿ.ಎಸ್.ಐ. ವೆಂಕಟೇಶ್, ಗ್ರಾಮಸ್ಥರು ಹಾಗೂ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು.