ನ್ಯಾಮತಿಯಲ್ಲಿನ ಪಂಚಮಸಾಲಿ ಸಮಾಜದ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಬಣ್ಣನೆ
ನ್ಯಾಮತಿ, ಅ.29- ಮಣ್ಣನ್ನೇ ಹಾಸಿ, ಹೊದ್ದು ಕೃಷಿಯಲ್ಲಿ ತೊಡಗಿರುವ ಪಂಚಮಸಾಲಿಗಳು ಹೊಲ, ಕಣಗಳಲ್ಲಿ ಒಕ್ಕಲು ಮಾಡಿ ರಾಶಿ ಹಾಕಿದಾಗ ಎಲ್ಲಾ ಶ್ರಮಿಕ ವರ್ಗದವರನ್ನು ಕರೆದು ಅವರಿಗೆ ಪಾಲು ನೀಡಿ, ಉಳಿದ ದವಸ-ಧಾನ್ಯ ಮನೆಗೆ ಕೊಂಡ್ಡೊಯ್ಯುವ ಹೃದಯ ವೈಶಾಲ್ಯ ಮತ್ತು ಸ್ವಾಭಿಮಾನಿಗಳಾಗಿದ್ದಾರೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.
ನ್ಯಾಮತಿ ಪಟ್ಟಣದ ಶ್ರೀ ಮಹಾಂತೇಶ್ವರ ವೀರಶೈವ ಕಲ್ಯಾಣ ಮಂದಿರದಲ್ಲಿ ಭಾನುವಾರ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ನ್ಯಾಮತಿ ತಾಲ್ಲೂಕು ಘಟಕದಿಂದ ಆಯೋಜಿಸ ಲಾಗಿದ್ದ ವೀರ ರಾಣಿ ಕಿತ್ತೂರು ಚೆನ್ನಮ್ಮ 199 ನೇ ವಿಜಯೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ನಮ್ಮ ಸಮುದಾಯದಲ್ಲಿ ಶೇ.10ರಷ್ಟು ಜನರಿಗೆ ಮನೆ, ಶೇ.15ರಷ್ಟು ಮಂದಿಗೆ ಭೂಮಿ ಇಲ್ಲ. ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಹಿಂದುಳಿದಿರುವ ಸಮಾಜಕ್ಕೆ 2ಎ ಮೀಸಲಾತಿಯನ್ನು ಕಾನೂನಾತ್ಮಕ ತೊಡಕುಗಳು ಇಲ್ಲದಂತೆ ಸರಿಯಾದ ರೀತಿಯಲ್ಲಿ ಈ ಕೆಲಸ ಆಗಬೇಕಿದೆ. ಯಾರಾದರೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರೂ ಮೀಸಲಾತಿ ನಿರ್ಧಾರ ಊರ್ಜಿತವಾಗುವಂತಿರಬೇಕು. ಹೀಗಾಗಿ, ವಿಳಂಬವಾದರೂ ಪರವಾಗಿಲ್ಲ. ಸಮರ್ಪಕ ರೀತಿ ಯಲ್ಲಿ ಮೀಸಲಾತಿ ದೊರೆಯಬೇಕು ಎಂದು ಹೇಳಿದರು.
2ಎ ಮೀಸಲಾತಿ ಕುರಿತು ನಮ್ಮ ಸಮಾಜವು 1994ರ ಪೂರ್ವದಿಂದಲೂ ಹೋರಾಟ ನಡೆಸುತ್ತಾ ಬಂದಿದೆ. ನೂರಕ್ಕೆ – ನೂರರಷ್ಟು 2ಎ ಮೀಸಲಾತಿ ದೊರೆಯುತ್ತದೆ ಎಂಬ ವಿಶ್ವಾಸ ನಮಗಿದೆ. ನಮ್ಮದು ಸಂವಿಧಾನಾತ್ಮಕ ಹೋರಾಟ ಆಗಿರುತ್ತದೆ. ಕಾನೂನಾತ್ಮಕ ಹೋರಾಟದಲ್ಲಿ ಬಹಳ ಗಟ್ಟಿಯಾಗಿದೇವೆ. ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎನ್ನುವ ವಿಚಾರದಲ್ಲಿ ಗಟ್ಟಿಯಾಗಿ ನಿಂತಿದ್ದೇವೆ. ಈಗಾಗಲೇ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೆಲ ಜಾತಿಗಳಿಗೆ ಮೀಸಲಾತಿ ಘೋಷಿಸಲಾಗಿದೆ. ಆದರೆ ಅಲ್ಲಿನ ಜನರು ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ಮರಾಠಿಗರಿಗೆ ಸರ್ಕಾರ ಘೋಷಣೆ ಮಾಡಿದ ಮೀಸಲಾತಿ ನಿಂತು ಹೋಗಿದೆ. ಅದೇ ರೀತಿ ಪಂಚಮಸಾಲಿ ಸಮುದಾಯದ ಪರಿಸ್ಥಿತಿ ಆಗಬಾರದು. ಹಾಗಾಗಿ ಸಮಾಜ ಸಂಘಟನೆಯೊಂದಿಗೆ ಬಲಿಷ್ಠವಾಗಬೇಕಾಗಿದೆ ಎಂದು ಹೇಳಿದರು.
ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಆಡಳಿತಾಧಿಕಾರಿ ಡಾ.ಎಚ್.ಪಿ.ರಾಜ್ಕುಮಾರ ಮಾತನಾಡಿ, ಶ್ರೀ ಪೀಠದಲ್ಲಿ ಈಗಾಗಲೇ 48 ಬಡ ವಿದ್ಯಾರ್ಥಿಗಳಿಗೆ ಅಶ್ರಯ ನೀಡಲಾಗಿದೆ. ಭಕ್ತ ಕೋಟಿ ಸಂಚಯನ ನಿಧಿಯನ್ನು ಸ್ಥಾಪನೆ ಮಾಡಲಾಗಿದ್ದು, ಪ್ರತಿಯೊಬ್ಬ ಬಂಧುಗಳು 555 ರೂ. ನೀಡಿ ಸಮಾಜದ ಸದಸ್ಯತ್ವ ಪಡೆಯುವುದು. ಅಲ್ಲದೇ ಲಕ್ಷ ಲಕ್ಷ ರೂ. ನೀಡುವ ಭಕ್ತರು ಇದ್ದಾರೆ. ಆದರೆ, ಸಮಾಜದ ಕಟ್ಟಕಡೆಯ ವ್ಯಕ್ತಿಯು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ 2500 ರೂ. 1 ಲಕ್ಷ ಸಮಾಜದ ಬಂಧುಗಳು ದೇಣಿಗೆ ನೀಡುವುದರಿಂದ ಸುಮಾರು 25 ಕೋಟಿ ಸಂಗ್ರಹವಾಗುತ್ತದೆ. ಇದರಿಂದ ಉನ್ನತ ಮಟ್ಟದ ಬೆಳವಣಿಗೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಚನ್ನಗಿರಿಯ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ತಹಶೀಲ್ದಾರ್ ಎಚ್.ಪಿ.ಗೋವಿಂದಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದೇಶ್ ಬೇಗೂರು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಾ ಪಾಟೀಲ್, ದಾವಣಗೆರೆಯ ಸಹಾಯಕ ಪ್ರಾಧ್ಯಾಪಕರಾದ ಪಿ.ಚೈತ್ರ, ಹಲಗೇರಿ ವೀರೇಶ್, ಒಡೆಯರ ಹತ್ತೂರು ಹಾಲೇಶ್, ಚೈತ್ರ ತಿಪ್ಪೇಸ್ವಾಮಿ ಸೇರಿದಂತೆ ಇತರರು ಮಾತನಾಡಿದರು.
ವೇದಿಕೆಯಲ್ಲಿ ಸಮಾಜ ಹಿರಿಯ ಮುಖಂಡರಾದ ಎನ್.ಡಿ.ಪಂಚಾಕ್ಷರಪ್ಪ, ಎನ್.ಜೆ.ವಾಗೀಶ್ ನುಚ್ಚಿನ್, ಪಟ್ಟಣಶೆಟ್ಟಿ ಪರಮಶ್ವರಪ್ಪ, ಶಿವಲಿಂಗಪ್ಪ ಬೆಳಗುತ್ತಿ, ಬಿ.ಗುರುಶಾಂತಪ್ಪ, ಪಟ್ಟಣಶೆಟ್ಟಿ ವೀರಣ್ಣ, ಡಾ. ಅಭಿಷೇಕ್ ನುಚ್ಚಿನ್, ಉತ್ತಂಗಿ ಕೊಟ್ರೇಶ್, ಎಚ್.ಬಿ.ಚಂದ್ರಪ್ಪ ಸೇರಿದಂತೆ ಹಲವಾರು ಗಣ್ಯರು ಇದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ನ್ಯಾಮತಿ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರ್ ಚಂದ್ರಶೇಖರ್ ವಹಿಸಿದ್ದರು.