ಕಸಾಪ ಕನ್ನಡಿಗರಲ್ಲಿ ಸಾಹಿತ್ಯ ಪ್ರಜ್ಞೆ ಮೂಡಿಸುತ್ತಿದೆ

ಕಸಾಪ ಕನ್ನಡಿಗರಲ್ಲಿ ಸಾಹಿತ್ಯ ಪ್ರಜ್ಞೆ ಮೂಡಿಸುತ್ತಿದೆ

ಹರಪನಹಳ್ಳಿ : ಕಸಾಪ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್

ಹರಪನಹಳ್ಳಿ, ಜೂ. 5- ಶತಮಾನದ ಹಿರಿಮೆಯನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು, ನುಡಿ, ನೆಲ, ಜಲ ಮತ್ತು ಭಾಷೆಗೆ ಬದ್ಧವಾಗಿ ಸಾವಿರಾರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ರಾಜ್ಯದ ವಿವಿಧೆಡೆ ಸಮ್ಮೇಳನ ಹಮ್ಮಿಕೊಂಡು, ಸಾಹಿತ್ಯ ಪ್ರಜ್ಞೆ ಮೂಡಿಸುತ್ತಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರೀಮತಿ ಯರಬಾಸಿ ಗಂಗಮ್ಮ ಸ್ಮರಣಾರ್ಥ ದತ್ತಿ, ಮೈದೂರು ಶ್ರೀಮತಿ ಸಾವಿತ್ರಮ್ಮ ದತ್ತಿ, ಕಂಚಿಕೇರಿ ಬಿದರಿ ಸಿದ್ದಮ್ಮ-ವೀರಮ್ಮ ಸ್ಮಾರಕ ದತ್ತಿ, ದಿ.ಮುದೇನೂರು ವಿರೂಪಾಕ್ಷಪ್ಪ ದತ್ತಿ, ಶ್ರೀಮತಿ ಎನ್. ಸುಮಂಗಲಮ್ಮ ಶಿವರುದ್ರಪ್ಪ ದತ್ತಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಹಿಂದಿ ಭಾಷೆಯ ನಂತರ ರಾಷ್ಟ್ರದಲ್ಲಿ 8 ಜನ ಜ್ಞಾನಪೀಠ ಪ್ರಶಸ್ತಿ ಪಡೆದ ಏಕೈಕ ರಾಜ್ಯ ಕರ್ನಾಟಕ. ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ವಿ.ಕೃ. ಗೋಕಾಕ್, ಚಂದ್ರಶೇಖರ ಕಂಬಾರ ಸೇರಿದಂತೆ ಅನೇಕ ಸಾಹಿತಿಗಳು ತಮ್ಮ ಕೊಡುಗೆ ಮೂಲಕ ಈ ನಾಡಿನ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದಾರೆ. ಹಾಗೆಯೇ ನಮ್ಮ ತಾಲ್ಲೂಕಿನಲ್ಲಿ ಬೀಚಿ, ಭೀಮವ್ವ, ಮುದೇನೂರು ಸಂಗಣ್ಣ, ಕುಂ.ಬಾ.ಸದಾಶಿವಪ್ಪ ರವರಂತಹ ಕವಿಗಳು ಇದ್ದಾರೆ. ಐತಿಹಾಸಿಕ ದೇವಸ್ಥಾನಗಳು ಅತ್ಯಂತ ಪ್ರಸಿದ್ದವಾಗಿವೆ ಎಂದರು.

ಬಿ.ಎಸ್.ಎನ್.ಎಲ್. ನಿವೃತ್ತ ಮಾರುಕಟ್ಟೆ ವ್ಯವಸ್ಥಾಪಕ ಕೆ.ಆರ್.ಸುಧಾಕರ್ ಮಾತನಾಡಿ, ಸಾವ ಯುವ ಕೃಷಿ, ಆಧುನಿಕ ಬೀಜೋತ್ಪಾದನೆ ಕುರಿತು ಉಪನ್ಯಾಸ ನೀಡಿ, ಕರ್ನಾಟಕದಲ್ಲಿ ಸಾವಯವ ಕೃಷಿಯನ್ನು ಪ್ರೋತ್ಸಾಹಿಸಲು ಸಾವಯವ ಕೃಷಿ ಮಿಷನ್‌ ಎಂಬ ಸಂಸ್ಥೆ ರಚನೆಯಾಗಿದೆ. ಸಾವಯವ  ಬೇಸಾಯ ಪದ್ಧತಿಯು ಪರಿಸರ ಸ್ನೇಹಿ ಎನಿಸಿದೆ. ಹೆಚ್ಚು ಇಳುವರಿ ಕೊಡುವ ಪದ್ಧತಿ. ಆರೋಗ್ಯಕರ ಉತ್ಪನ್ನಗಳ ಪದ್ಧತಿ ಎನ್ನುವ ಹೆಸರು ಗಳಿಸಿದೆ. ರೈತರೆಲ್ಲರೂ ಈ ಪದ್ಧತಿಯನ್ನೇ ಅಳವಡಿಸಿಕೊಳ್ಳು ವಂತೆ ಪ್ರೋತ್ಸಾಹ, ಪ್ರಚಾರಗಳು ಅಗತ್ಯವಾಗಿವೆ ಎಂದರು .

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆ ಸಮೃದ್ಧ ಭಾಷೆಯಾಗಿದ್ದು, ಮಮ್ಮಿ, ಡ್ಯಾಡಿ ಸಂಸ್ಕೃತಿ ಬೇಡ. ಅಪ್ಪ-ಅಮ್ಮ ಎಂದು ಉಚ್ಛಾರ ಮಾಡಿದರೆ  ಸಿಗುವ ಆನಂದವೇ ಬೇರೆಯಾಗಿದೆ. ಕನ್ನಡ ಭಾಷೆಗೆ ಅದರದೇ ಆದ ಮಹತ್ವ ಇದೆ. ಬೇರೆ ಭಾಷೆ ಬದುಕಿಗೆ ಇರಲಿ ಕನ್ನಡ ಭಾಷೆ ಹೃದಯ ಭಾಷೆಯಾಗಿರಲಿ.  ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತಹ ಕೆಲಸ ಮಾಡಬೇಕು ಎಂದರು. 

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶು ಪಾಲ ಎಸ್.ಷಣ್ಮುಖಗೌಡ ಮಾತನಾಡಿದರು. ಈ ಸಂದರ್ಭದಲ್ಲಿ  ದೈಹಿಕ ನಿರ್ದೇಶಕರಾದ  ಎಚ್.ಕೊಟ್ರೇಶ್, ಕಸಾಪ ಗೌರವ ಕಾರ್ಯದರ್ಶಿ ಜಿ.ಮಹಾದೇವಪ್ಪ,  ಗೌರವ ಕೋಶಾಧಿಕಾರಿ ಕೆ.ರಾಘವೇಂದ್ರ ಶೆಟ್ಟಿ, ಉಪನ್ಯಾಸಕರಾದ ಕೆ.ಸತೀಶ, ಶಂಭುಲಿಂಗಪ್ಪ,  ಗ್ರಂಥಪಾಲಕರಾದ ನಾಗರತ್ನ ಹೊಸಮನಿ ಉಪಸ್ಥಿತರಿದ್ದರು.

error: Content is protected !!