ಹರಪನಹಳ್ಳಿ : ಸದಾಶಿವ ಆಯೋಗದ ವರದಿ ಶಿಫಾರಸ್ಸು ಮಾಡದಂತೆ ಒತ್ತಾಯ

ಹರಪನಹಳ್ಳಿ : ಸದಾಶಿವ ಆಯೋಗದ  ವರದಿ ಶಿಫಾರಸ್ಸು ಮಾಡದಂತೆ ಒತ್ತಾಯ

ಮೀಸಲಾತಿ ಸಂರಕ್ಷಾ ಒಕ್ಕೂಟದ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ

ಹರಪನಹಳ್ಳಿ.ಏ.16 ರಾಜ್ಯ ಸರ್ಕಾರ ನ್ಯಾ. ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳ ಮೀಸಲಾತಿ) ಹಂಚಿಕೆ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಅಸಂವಿಧಾನಿಕ ಮತ್ತು ಅವೈಜ್ಞಾನಿಕ ಸದಾಶಿವ ಆಯೋಗದ ವರದಿಯನ್ನು ಶಿಫಾರಸ್ಸು ಮಾಡದಂತೆ ಒತ್ತಾಯಿಸಿ ತಾಲ್ಲೂಕು ಮೀಸಲಾತಿ ಸಂರಕ್ಷಾ ಒಕ್ಕೂಟದ ಸಮಿತಿಯ ಪದಾಧಿಕಾರಿಗಳು  ಪ್ರತಿಭಟನೆ ಮಾಡಿ ತಹಶೀಲ್ದಾರರಿಗೆ  ಮನವಿ ಸಲ್ಲಿಸಿದರು.

ಪಟ್ಟಣದ ಪ್ರವಾಸಿ ಮಂದಿರದ ವೃತ್ತದಲ್ಲಿ  ಮೀಸಲಾತಿಯಿಂದ ವಂಚಿತರಾಗಿರುವ ಭೋವಿ, ಲಂಬಾಣಿ, ಕೊರಚ, ಕೊರಮ, ಅಲೆಮಾರಿ ಸೇರಿದಂತೆ ಅನೇಕ ಸಮುದಾಯದ ಯುವಕರು, ಕೂಲಿ ಕಾರ್ಮಿಕರು  ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಅವೈಜ್ಞಾನಿಕ ಸದಾಶಿವ ಆಯೋಗದ ವರದಿಯ ವಿರುದ್ಧ ಹಾಗೂ ವರದಿಯನ್ನು ಶಿಫಾರಸ್ಸು ಮಾಡಲು ಹುನ್ನಾರ ನಡೆಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ಸಮುದಾಯಗಳನ್ನು ಬದಿಗೊತ್ತಿ, ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದ ಒಳ ಮೀಸಲಾತಿಯನ್ನು ವರ್ಗೀಕರಣ ಮಾಡಿರುವುದು ಖಂಡನೀಯ. ಇಂತಹ ವರದಿಯು ಅಸಂವಿಧಾನಿಕ ವರದಿ ಎಂದು ಗೊತ್ತಿದ್ದರೂ ಸಹ ಸಹೋದರರಂತೆ ಬಾಳುತ್ತಿರುವ ಸಮುದಾಯಗಳ ಮಧ್ಯೆ ಇಂತಹ ತಂತ್ರ ಮತ್ತು ಕುತಂತ್ರದಿಂದ ಒಳ ಮೀಸಲಾತಿಯನ್ನು ವಿಭಜಿಸಿರುವುದು ನ್ಯಾಯ ಸಮ್ಮತವಾಗಿರುವುದಿಲ್ಲ  ಇದರಿಂದ ರಾಜ್ಯದ ಬಂಜಾರ, ಭೋವಿ, ಕೊರಚ, ಕೊರಮ, ಅಲೆಮಾರಿ, ಅರೆ ಮಾರಿ ಮತ್ತಿತರೆ ಸಣ್ಣ ಸಮುದಾಯಗಳು ಸರ್ಕಾರದ ಈ ನಿರ್ಧಾರವನ್ನು  ಬಲವಾಗಿ ಖಂಡಿಸಿದರು.

ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ಹಿರಿಯ ಮುಖಂಡ ಎಂ.ಪಿ.ನಾಯ್ಕ, ಕೊರಚ ಸಮುದಾಯದ ಮುಖಂಡ ಅಶೋಕ, ಭೋವಿ ಸಮುದಾಯದ ಮುಖಂಡ ಬೆಂಡಿಗೇರಿ ಗುರುಸಿದ್ದಪ್ಪ, ಕೊರಮ ಸಮುದಾಯದ ಮುಖಂಡ ರಾಮಮೂರ್ತಿ, ನಾಗರಾಜ್, ಇತರೆ ಸಮುದಾಯದ ಮುಖಂಡರುಗಳಾದ ಎಸ್.ಪಿ. ಲಿಂಬ್ಯಾನಾಯ್ಕ, ಅಜ್ಜಯ್ಯ, ಬಿ.ವೈ. ವೆಂಕಟೇಶ್, ಮಂಜ್ಯಾನಾಯ್ಕ, ಎಂ.ವಿ. ಕೃಷ್ಣಕಾಂತ್, ಗೋಪಿನಾಯ್ಕ, ನಾಗರಾಜ್ ನಾಯ್ಕ, ಹರೀಶ್ ನಾಯ್ಕ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!