ವಾರಣಾಸಿ (ಉತ್ತರ ಪ್ರದೇಶ), ಡಿ. 18 – ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಾರಣಾಸಿ ಕಚೇರಿ ಮಾರಾಟಕ್ಕಿದೆ ಎಂದು ಆನ್‌ಲೈನ್ ಮಾರಾಟ ತಾಣವಾದ ಒ.ಎಲ್.ಎಕ್ಸ್.ನಲ್ಲಿ ಪ್ರಕಟಿಸಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಪ್ರಧಾನಿ ಮೋದಿ ಅವರ ಜನಸಂಪರ್ಕ ಕಚೇರಿಯ ಚಿತ್ರಗಳನ್ನು ತೆಗೆದಿದ್ದರು. ನಂತರ ಅದನ್ನು ಒ.ಎಲ್.ಎಕ್ಸ್. ವೆಬ್ ತಾಣದಲ್ಲಿ ಮಾರಾಟಕ್ಕಿದೆ ಎಂದು ಪ್ರಕಟಿಸಿದ್ದರು. ಪ್ರಧಾನಿ ಕಚೇರಿ ಜವಾಹರ್ ನಗರ ಪ್ರದೇಶದಲ್ಲಿದೆ.
ಪ್ರಧಾನಿ ಕಚೇರಿ ಮಾರಾಟಕ್ಕೆ ಇದೆ ಎಂದು ಒ.ಎಲ್.ಎಕ್ಸ್. ತಾಣದಲ್ಲಿ ಹೇಳಿರುವುದು ನಿನ್ನೆ ನಮ್ಮ ಗಮನಕ್ಕೆ ತಂದಿದೆ. ತಕ್ಷಣವೇ ಭೇಲುಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಎಸ್.ಎಸ್.ಪಿ. ಅಮಿತ್ ಪಾಠಕ್ ತಿಳಿಸಿದ್ದಾರೆ.
ಈ ಘಟನೆಯಲ್ಲಿ ನಾಲ್ವರು ಭಾಗಿಯಾಗಿದ್ದು, ಅವರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಆರೋಪಿಗಳ ವಿಚಾರಣೆ ನಡೆಸುತ್ತಿದ್ದು, ಮುಂದಿನ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದವರು ಹೇಳಿದ್ದಾರೆ.