ದಾವಣಗೆರೆ, ಜ.8- ಇದೇ ಜ. 11 ಮತ್ತು 12 ರಂದು ದಾವಣಗೆರೆ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನವು ಜಗಳೂರಿನ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಸಮ್ಮೇಳನದ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡ ರಥದ ಮೂಲಕ ಎಲ್ಲೆಡೆ ಸಮ್ಮೇಳನದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಸರ್ವರನ್ನೂ ಆಹ್ವಾನಿಸಲಾಗುತ್ತಿದೆ ಎಂದರು.
11ರ ಶನಿವಾರ ಬೆಳಗ್ಗೆ 8ಕ್ಕೆ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಧ್ವಜಾರೋಹಣ, ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ನಾಡ ಧ್ವಜಾರೋಹಣ ನೆರವೇರಿಸುವರು. 9ಕ್ಕೆ ಕನ್ನಡ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನಾ ಧ್ಯಕ್ಷ ರ ಮೆರವಣಿಗೆಗೆ ಎಸ್ಪಿ ಉಮಾ ಪ್ರಶಾಂತ್ ಚಾಲನೆ ನೀಡಲಿದ್ದಾರೆ ಎಂದರು.
ಬೆಳಗ್ಗೆ 11ಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸಮ್ಮೇಳನ ಉದ್ಘಾಟಿಸಲಿ ದ್ದಾರೆ. ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಹಲಿಂಗರಂಗ ವೇದಿಕೆ ಉದ್ಘಾಟಿಸಲಿ ದ್ದಾರೆ. ಸಂಸದೆ ಡಾ| ಪ್ರಭಾ ಮಲ್ಲಿಕಾರ್ಜುನ್ ಚಿನ್ನ ಹಗರಿಯ ನುಡಿ ತೇರು .. ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡುವರು.
ಜೆ.ಎಂ.ಇಮಾಂ ಮಹಾದ್ವಾರವನ್ನು ಶಾಸಕ ಶಾಮನೂರು ಶಿವಶಂಕರಪ್ಪ, ವಿದ್ಯಾರತ್ನ ಡಾ.ಟಿ.ತಿಪ್ಪೇಸ್ವಾಮಿ ಸಭಾಂಗಣ ಉದ್ಘಾಟನೆಯನ್ನು ಕಸಾಪ ರಾಜಾಧ್ಯಕ್ಷ ಡಾ.ಮಹೇಶ ಜೋಶಿ ನೆರವೇರಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಸಿ.ವಿ.ಪಾಟೀಲ್, ಸಮ್ಮೇಳನಾಧ್ಯಕ್ಷ ಡಾ. ಎ.ಬಿ.ರಾಮಚಂದ್ರಪ್ಪ ಅವರಿಗೆ ಕನ್ನಡ ಧ್ವಜ ಹಸ್ತಾಂತರ ಮಾಡುವರು. ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡ, ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.
ಯಾರನ್ನೂ ಹೊರಗಿಟ್ಟಿಲ್ಲ
ಜಗಳೂರು ಕನ್ನಡ ಸಾಹಿತ್ಯ ಸಮ್ಮೇಳನ ಬಹಿಷ್ಕರಿಸುವುದಾಗಿ ಹೇಳಿದವರು ಒಳಗೊಂಡಂತೆ ಯಾರೂ ನಮ್ಮ ವಿರೋಧಿಗಳಲ್ಲ. ಎಲ್ಲರನ್ನೂ ಕನ್ನಡಮ್ಮನ ತೇರು ಎಳೆಯಲು ಆಹ್ವಾನಿಸುತ್ತೇವೆ ಎಂದು ಕನ್ನಡ ಸಾಹಿತ್ಯ ಪರಿ ಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು.
ಸರ್ವಾಧ್ಯಕ್ಷರ ಆಯ್ಕೆಯನ್ನು ಎಲ್ಲರ ಸಮಕ್ಷಮದಲ್ಲಿ ಮಾಡಲಾಗಿದೆ. ಈ ಹಿಂದಿನ ಜಿಲ್ಲಾ ಸಮ್ಮೇಳನದಲ್ಲಿ ಬೇರೆ ತಾಲ್ಲೂಕಿನವರು ಸರ್ವಾಧ್ಯಕ್ಷರಾದ ಉದಾಹರಣೆ ಇವೆ ಎಂದ ಅವರು, ನಾವು ಯಾರನ್ನೂ ಹೊರಗಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಬಂದ ಮೇಲೆ 4 ತಾಲ್ಲೂಕು, 8 ಜಿಲ್ಲಾ ಸಮ್ಮೇಳನ ಮಾಡಿದ್ದೇನೆ. ನನಗೆ ಯಾರೂ ವಿರೋಧಿಗಳಿಲ್ಲ. ನಾವು ಸಮ್ಮೇಳನದ ಗೋಷ್ಠಿಗಳಲ್ಲಿ ಭಾಗವಹಿಸುವಂತೆ ಜಗಳೂರು ಹಲವು ಸಾಹಿತಿಗಳಿಗೆ ಆಹ್ವಾನ ನೀಡಿದ್ದೆವು. ಆದರೆ ಅವರೇ ನಾವು ಸಮ್ಮೇಳನದಲ್ಲಿ ಭಾಗವಹಿಸುತ್ತೇವೆ ಆದರೆ ವೇದಿಕೆ ಮೇಲೆ ಬರುವುದಿಲ್ಲ ಎಂದಿದ್ದರು. ಆ ಕಾರಣಕ್ಕೆ ಬೇರೆ ಜಿಲ್ಲೆಯವರನ್ನು ಗೋಷ್ಠಿಗಳಿಗೆ ಸೇರಿಸಬೇಕಾಯಿತು ಎಂದರು.
ಪ್ರೊ.ಎಸ್.ಬಿ.ರಂಗನಾಥ್ ಪುಸ್ತಕ ಮಳಿಗೆ ಉದ್ಘಾಟನೆ ಯನ್ನು ಕೆ.ಅಬ್ದುಲ್ ಜಬ್ಬಾರ್, ಡಾ.ಎಂ.ಜಿ. ಈಶ್ವರಪ್ಪ ವಸ್ತು ಪ್ರದರ್ಶನ ಮಳಿಗೆಯನ್ನ ಪಪಂ ಅಧ್ಯಕ್ಷ ಕೆ.ಎಸ್.ನವೀನ್ ಕುಮಾರ್ ಉದ್ಘಾಟಿಸುವರು. ಶಾಸಕರಾದ ಬಿ.ಪಿ.ಹರೀಶ್, ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ, ಬಸವರಾಜ್ ಶಿವಗಂಗಾ, ಆಸಗೋಡು ಜಯಸಿಂಹ, ಡಾ.ಎಚ್.ಎಸ್. ಮಂಜುನಾಥ ಕುರ್ಕಿ, ವೀರೇಶ್ ಎಸ್.ಒಡೇನಪುರ, ನಾಗರಾಜ್ ಎಸ್.ಬಡದಾಳ್, ಎ.ಎಲ್.ತಿಪ್ಪೇಸ್ವಾಮಿ, ಜಿ. ರುದ್ರಯ್ಯ, ಕೆ.ಪಿ.ಪಾಲಯ್ಯ, ಮರೇನಹಳ್ಳಿ ಕಲ್ಲೇರುದ್ರೇಶ್ ಸೇರಿದಂತೆ ಇತರರು ಭಾಗವಹಿಸುವರು ಎಂದು ತಿಳಿಸಿದರು.
ಮಧ್ಯಾಹ್ನ 2ಕ್ಕೆ ಸಾಹಿತ್ಯ ಮತ್ತು ಸಾಮಾಜಿಕ ನೆಲೆಗಳು, ಸೌಹಾರ್ದತೆ, ಸಮಾನತೆ, ಸಾಮಾಜಿಕ ನ್ಯಾಯ, ದಾವಣಗೆರೆ ಜಿಲ್ಲೆಯ ಐತಿಹಾಸಿಕ ನೆಲೆಗಳು ಕುರಿತಂತೆ ವಿವಿಧ ಗೋಷ್ಠಿಗಳು ನಡೆಯಲಿವೆ ಎಂದು ತಿಳಿಸಿದರು.
12ರ ಭಾನುವಾರ ಬೆಳಗ್ಗೆ 9ರಿಂದ ಭಜನೆ, ವಚನ ಗಾಯನ, ಕವಿಗೋಷ್ಠಿಗಳು ನಡೆಯಲಿವೆ. ಬುಡಕಟ್ಟು ಸಮುದಾಯಗಳ ಸಂಸ್ಕೃತಿ ಕುರಿತಾದ ಗೋಷ್ಠಿ, ಮಧ್ಯಾಹ್ನ 1.15ಕ್ಕೆ ದಾವಣಗೆರೆ ಜಿಲ್ಲಾ ಕೃಷಿ, ನೀರಾವರಿ ಹೋರಾಟಗಳ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಬಹಿರಂಗ ಅಧಿವೇಶನ ನಡೆಯಲಿವೆ ಎಂದು ತಿಳಿಸಿದರು.
ಸಂಜೆ 4ಕ್ಕೆ ಸಮಾರೋಪದಲ್ಲಿ ಡಾ.ಬರಗೂರು ರಾಮಚಂದ್ರಪ್ಪ ಸಮಾರೋಪ ನುಡಿ, ಡಾ.ಎ.ಬಿ. ರಾಮಚಂದ್ರಪ್ಪ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ. ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಾಧಕರಿಗೆ ಸನ್ಮಾನ ನೆರ ವೇರಿಸುವರು. ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ, ಜಿಪಂ ಸಿಇಓ ಸುರೇಶ್ ಬಿ.ಇಟ್ನಾಳ್, ಇ.ಎಂ.ಮಂಜುನಾಥ, ಡಾ.ಎಚ್.ಎಸ್.ಮಂಜುನಾಥ್ ಕುರ್ಕಿ, ಎಂ.ಬಸವಪ್ಪ, ಎಸ್.ಹೆಚ್.ಹೂಗಾರ್, ಬಿ.ಎಂ.ಸದಾಶಿವಪ್ಪ ಶ್ಯಾಗಲೆ, ಬಿ. ದಿಳ್ಳೆಪ್ಪ, ರೇವಣಸಿದ್ದಪ್ಪ ಅಂಗಡಿ, ಸಿ.ಜಿ.ಜಗದೀಶ್ ಕೂಲಂಬಿ, ಪ್ರಕಾಶ್ ಜಿಗಳಿ ಇತರರು ಭಾಗವಹಿಸುವರು ಎಂದು ತಿಳಿಸಿದರು.
ಕಸಾಪ ಕೋಶಾಧ್ಯಕ್ಷ ರಾಘವೇಂದ್ರ ಕೆ.ನಾಯರಿ, ಬಿ. ದಿಳ್ಳೆಪ್ಪ, ರೇವಣಸಿದ್ದಪ್ಪ ಅಂಗಡಿ, ಜಿಗಳಿ ಪ್ರಕಾಶ್, ಸತ್ಯಭಾಮ, ರುದ್ರಾಕ್ಷಿಬಾಯಿ ಪತ್ರಿಕಾಗೋಷ್ಠಿಯಲ್ಲಿದ್ದರು.