ಹರಿಹರ, ಮಾ.11- ನಗರದಲ್ಲಿ ಮಹಾ ಶಿವರಾತ್ರಿ ಹಬ್ಬವನ್ನು ಭಕ್ತಿ ಪೂರ್ವಕವಾಗಿ ಆಚರಣೆ ಮಾಡಲಾಯಿತು.
ಐತಿಹಾಸಿಕ ಪ್ರಸಿದ್ಧ ಶ್ರೀ ಹರಿಹರೇಶ್ವರ, ಶ್ರೀ ಮಹಾಲಕ್ಷ್ಮಿ, ನೂರ ಎಂಟು ಲಿಂಗೇಶ್ವರ, ಗಣಪತಿ, ಲಕ್ಷ್ಮಿ ವೆಂಕಟೇಶ್ವರ, ಕುಂಬಳೇಶ್ವರ, ಆಂಜನೇಯ, ಸುಬ್ರಹ್ಮಣ್ಯ, ಗ್ರಾಮದೇವತೆ ಊರಮ್ಮ, ಸಾಯಿಬಾಬಾ, ಜೋಡು ಬಸವೇಶ್ವರ, ವೀರಭದ್ರೇಶ್ವರ, ರೇವಣಸಿದ್ದೇಶ್ವರ, ಅಯ್ಯಪ್ಪ ಸ್ವಾಮಿ, ರಾಘವೇಂದ್ರ ಸ್ವಾಮಿ ಮಠ ಸೇರಿದಂತೆ, ಹಲವಾರು ದೇವಸ್ಥಾನಗಳಲ್ಲಿ ಕಾಶಿಯಿಂದ ಬಂದಂತಹ ಪವಿತ್ರ ಗಂಗಾಜಲವನ್ನು ಹಾಕಿ ವಿಶೇಷ ಅಭಿಷೇಕ ಮಾಡಲಾಯಿತು.
ಹೋಮ, ಅಲಂಕಾರ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ನಗರದ ಪ್ರಸಿದ್ಧ ನೂರ ಎಂಟು ಲಿಂಗೇಶ್ವರ ಸ್ವಾಮಿಗೆ ತುಂಗಭದ್ರಾ ನದಿಯಿಂದ ನೀರನ್ನು ತಂದು ಅಭಿಷೇಕ ಮಾಡಿ ನಂತರದಲ್ಲಿ ಮಹಾಮಂಗಳಾರತಿ ಮಾಡಲಾಯಿತು.
ಶಿವರಾತ್ರಿ ಹಬ್ಬದಂದು ಅಜ್ಞಾನವನ್ನು ಕಳೆದು, ಸುಜ್ಞಾನದ ದೀವಿಗೆ ಬೆಳಗುವಂತೆ ಮಾಡುವುದಕ್ಕೆ ಶಿವನನ್ನು ಆರಾಧನೆ ಮಾಡಲಾ ಗುತ್ತದೆ. ಶಿವನಿಗೆ ಅತೀ ಶ್ರೇಷ್ಠವಾದ ಬಿಲ್ವಪತ್ರೆ ಅರ್ಪಿಸಿ, ತುಳಸಿಯಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಶಿವನನ್ನು ರಾತ್ರಿ ಭಜಿಸಿದರೆ ಅನೇಕ ಪಾಪಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎನ್ನುವುದು ರೂಢಿಯಲ್ಲಿದೆ.
ದೇವಸ್ಥಾನ ಮತ್ತು ಗರ್ಭಗುಡಿಯನ್ನು ವಿವಿಧ ಬಗೆಯ ಹೂವಿನಿಂದ ಅಲಂಕರಿಸಲಾಗಿತ್ತು. ದೇವರ ದರ್ಶನಕ್ಕೆ ಅನುಕೂಲವಾಗುವಂತೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ತಮ್ಮ ಕುಟುಂಬ ಸಮೇತರಾಗಿ ನಗರದ ಎಲ್ಲಾ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದ ತಡ ರಾತ್ರಿವರೆಗೂ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಮಾಡಿ ಆಶೀರ್ವಾದ ಪಡೆದರು. ಕೊರೊನಾ ಸಮಸ್ಯೆ ತಡೆಗಟ್ಟಲು ದೇವಸ್ಥಾನದ ಬಾಗಿಲ ಬಳಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿತ್ತು. ಕಡ್ಡಾಯವಾಗಿ ಮಾಸ್ಕ್ ಧರಿಸುವವಂತೆ ನಾಮಫಲಕ ಹಾಕಲಾಗಿತ್ತು.
ಶಿವರಾತ್ರಿ ಹಬ್ಬದಂದು ಫಲಹಾರ ಹಾಗೂ ಹಣ್ಣುಗಳನ್ನು ಸ್ವೀಕರಿಸುವುದರಿಂದ ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದರು. ಕಲ್ಲಂಗಡಿ, ಸೇಬು, ಚಿಕ್ಕು, ದ್ರಾಕ್ಷಿ, ಉತ್ತತ್ತಿ, ಮುಂತಾದ ಹಣ್ಣುಗಳನ್ನು ಖರೀದಿಸಿ ಪೂಜೆಯ ನಂತರದಲ್ಲಿ ಸಿಹಿ ತಿನಿಸುಗಳ ಜೊತೆಗೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀನಿವಾಸಮೂರ್ತಿ, ಗುರುಪ್ರಸಾದ್, ಚಂದ್ರಕಾಂತ, ಶೇಷಾಚಲ, ಗ್ರಾಮದೇವತೆ ದೇವಸ್ಥಾನದ ನಾಗರಾಜ್, ನೂರಾ ಎಂಟು ಲಿಂಗೇಶ್ವರ ದೇವಸ್ಥಾನದ ಹಾವನೂರು ಮಹಾರುದ್ರಪ್ಪ, ಹಿರೇಬಿದರಿ ಬಸವರಾಜಪ್ಪ, ಕುಂಬಳೇಶ್ವರ ದೇವಸ್ಥಾನದ ಈರಣ್ಣ ಬೇಲೂರು, ಸಾಯಿಬಾಬಾ ಮಂದಿರದ ಕುಮಾರ್ ಸ್ವಾಮಿ, ರಾಘವೇಂದ್ರ ಮಠದ ಪವನ್ ಕುಮಾರ್ ಇನ್ನಿತರರು ಹಾಜರಿದ್ದರು.