ದಾವಣಗೆರೆ, ಮಾ.31- ಕೋವಿಡ್ – 19 ಪ್ರಕರಣಗಳ ಎರಡನೇ ಅಲೆಯ ಅಪಾಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ಸಭೆ ಸಮಾರಂ ಭಗಳು ಹಾಗೂ ಆಚರಣೆಗಳನ್ನು ಮಾಡುವ ಪೂರ್ವದಲ್ಲಿ ಸಾರ್ವಜನಿಕರು ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ವಿವಿಧ ಸಂದರ್ಭಗಳಲ್ಲಿ ಸಮಾರಂಭಗಳು, ಆಚರಣೆಗಳಲ್ಲಿ ಸಾರ್ವಜನಿಕರಿಗೆ ಅವಕಾಶ ನೀಡಬಹುದಾದ ಸಂಖ್ಯೆಯನ್ನು ಮೀರದಂತೆ ಅಗತ್ಯ ಮಾನದಂಡಗಳನ್ನು ಅನುಸರಿಸಿ, ಸಾರ್ವಜನಿಕರಿಗೆ ಅವಕಾಶ ನೀಡಲು ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಸಕ್ಷಮ ಪ್ರಾಧಿಕಾರಗಳು ಅನುಮತಿ ನೀಡಲಿವೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ಸಭೆ, ಸಮಾರಂಭ ಮತ್ತು ಸಾರ್ವಜನಿಕರು ಸೇರುವ ಇತರೆ ಕಾರ್ಯಕ್ರಮಗಳಿಗೆ ಆಯುಕ್ತರು, ಮಹಾನಗರ ಪಾಲಿಕೆ ಈ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಸಭೆ-ಸಮಾರಂಭಗಳಿಗೆ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಕೋವಿಡ್ – 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ವಿವಿಧ ಸಮಾರಂಭಗಳು ಹಾಗೂ ಆಚರಣೆಗಳ ಸಂದರ್ಭದಲ್ಲಿ ಹೆಚ್ಚು ಸಾರ್ವಜನಿಕರು ಗುಂಪು ಸೇರುವ ಹಿನ್ನೆಲೆಯಲ್ಲಿ ಸೋಂಕು ಹರಡುವ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ ಸಮಾರಂಭದ ಪೂರ್ವದಲ್ಲಿ ಮೇಲ್ಕಂಡ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ತಪ್ಪಿದಲ್ಲಿ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.