ಇನ್ನೂ ಲಭ್ಯವಾಗದ ವಿದ್ಯಾರ್ಥಿ ವೇತನ : ಎಐಡಿಎಸ್‌ಓ ಆಕ್ರೋಶ

ದಾವಣಗೆರೆ, ಜ. 8- ಕಳೆದ ಮೂರು ವರ್ಷಗಳಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಸರಿಯಾಗಿ ವಿದ್ಯಾರ್ಥಿ ವೇತನ ಲಭ್ಯವಾಗುತ್ತಿಲ್ಲ. ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆ ಅಡಿಯಲ್ಲಿ ಬರುವ ಪದವಿ, ಸ್ನಾತಕೋತ್ತರ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಲಭ್ಯವಾಗುತ್ತಿಲ್ಲ ಎಂದು ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಟಿ.ಎಸ್. ಸುಮನ್ ಹೇಳಿದ್ದಾರೆ.

ರಾಜ್ಯದ ಹಲವೆಡೆ ಕೆಲವು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ಕೂಡ ವಿದ್ಯಾರ್ಥಿ ವೇತನ ದಿಂದ ವಂಚಿತರಾಗಿದ್ದಾರೆ. ಒಂದೆಡೆ ದಿನದಿಂದ ದಿನಕ್ಕೆ ಶಿಕ್ಷಣದ- ಅದರಲ್ಲೂ, ಉನ್ನತ ಶಿಕ್ಷಣದ ವೆಚ್ಚ ಅತ್ಯಂತ ಅಧಿಕವಾಗುತ್ತಿದೆ. ಆದರೆ ಇನ್ನೊಂದೆಡೆ ಕ್ರಮೇಣವಾಗಿ ವಿದ್ಯಾರ್ಥಿ ವೇತನ ಕಡಿತಗೊಳ್ಳುತ್ತಿರುವುದರಿಂದ ಅಧಿಕ ಪ್ರಮಾಣದ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ದೂರ ತಳ್ಳಲಾಗುತ್ತಿದೆ. ಅದರಲ್ಲೂ ವಿದ್ಯಾರ್ಥಿ ವೇತನದ ಮೇಲೆ ಅವಲಂಬಿತರಾಗಿರುವ ರೈತ, ಕಾರ್ಮಿಕರನ್ನೊಳಗೊಂಡಂತೆ  ಬಡಜನರ ಮಕ್ಕಳ ಶಿಕ್ಷಣದ ಕನಸುಗಳು ಇದರಿಂದ ಛಿದ್ರಗೊಳ್ಳುತ್ತಿವೆ. ಸರ್ಕಾರದ ಈ ನಡೆಯನ್ನು ಎಐಡಿಎಸ್ಓ ತೀವ್ರವಾಗಿ ಖಂಡಿಸುತ್ತದೆ. 

ಈ ಸಮಸ್ಯೆಯ ತೀವ್ರತೆಗೆ ಉದಾಹರಣೆ ಎಂಬಂತೆ ಖಾಸಗಿ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 80,000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರೆಯುತ್ತಿಲ್ಲ ಎಂದು ಹೇಳಿದ್ದಾರೆ.

ಏಳು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಎಂಬಿಎ ಎಂಸಿಎ ಮತ್ತು ಎಂಟೆಕ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಮುಗಿಯುತ್ತಿದ್ದರು ವಿದ್ಯಾರ್ಥಿವೇತನ ದೊರೆ ಯದಿರುವುದನ್ನು ಖಂಡಿಸಿ ಇತ್ತೀಚೆಗಷ್ಟೇ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಚಳವಳಿ ನಡೆಸಲಾಗಿದೆ ತಿಳಿಸಿದ್ದಾರೆ.

ಆದ್ಯತೆಯ ಮೇರೆಗೆ ಸರ್ಕಾರವು ಶಿಕ್ಷಣಕ್ಕೆ ಬಜೆಟ್ ನಲ್ಲಿ ಅನುದಾನ ನಿಗದಿಪಡಿಸಬೇಕು ಮತ್ತು ಎಲ್ಲ ವಿಭಾಗದ ಮತ್ತು ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಖಾತ್ರಿ ಪಡಿಸಬೇಕೆಂದು ಈ ಮೂಲಕ ಎಐಡಿಎಸ್ಓ ಕರ್ನಾಟಕ ರಾಜ್ಯ ಸಮಿತಿಯು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತದೆ.

error: Content is protected !!