ದಾವಣಗೆರೆ, ನ.15- ಕಣ್ಣೆದುರಿಗೆ ರೈಲಿನ ಗಾಲಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ವಯೋವೃದ್ಧನನ್ನು ಹೋಮ್ ಗಾಡ್೯ ರಕ್ಷಿಸಿ ಪ್ರಾಣ ಉಳಿಸಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಜನಶತಾಬ್ಧಿ ಎಕ್ಸ್ಪ್ರೆಸ್ ರೈಲಿನ ಡಿ-8ರ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ರಾಧಾಕೃಷ್ಣ (64) ಎಂಬುವವರ ಪ್ರಾಣವನ್ನು ಹೋಮ್ ಗಾಡ್೯ ಎನ್. ಲಕ್ಷ್ಮಣ್ ನಾಯ್ಕ್ ಅವರು ರಕ್ಷಿಸಿದ ಘಟನೆ ನಡೆದಿದೆ.
ರಾಧಾಕೃಷ್ಣ ಅವರು ರೈಲು ದಾವಣಗೆರೆ ನಿಲ್ದಾಣಕ್ಕೆ ಆಗಮಿಸಿದಾಗ ಬಿಸ್ಕೆಟ್ ಖರೀದಿಸಲು ಕೆಳಗೆ ಇಳಿದು ಹೋಗಿದ್ದಾರೆ. ಅಷ್ಟರಲ್ಲಿ ರೈಲು ಚಲಿಸಲು ಪ್ರಾರಂಭಿಸಿದೆ. ರೈಲು ಚಲಿಸುವುದನ್ನು ನೋಡಿದ ರಾಧಾಕೃಷ್ಣ ಓಡಿ ಬಂದು ಚಲಿಸುವ ರೈಲು ಹತ್ತಲು ಹೋಗಿ ಜಾರಿ ಕೆಳಗೆ ಬಿದ್ದಿದ್ದು, ಇನ್ನೇನು ರೈಲಿನ ಚಕ್ರಕ್ಕೆ ಸಿಲುಕಬೇಕೆನ್ನುವಷ್ಟರಲ್ಲಿ ಎದುರಿಗೆ ನಿಂತಿದ್ದ ಹೋಮ್ ಗಾಡ್೯ ಎನ್.ಲಕ್ಷ್ಮಣ್ ನಾಯ್ಕ್ ಕೂಡಲೇ ಕೈಹಿಡಿದು ಎಳೆದಿದ್ದಾರೆ. ಅಷ್ಟರಲ್ಲಿ ಆರ್ಪಿಎಫ್ ಮುಖ್ಯ ಪೇದೆ ಅಶೋಕ್ ಓಡಿ ಬಂದು ಗಾಬರಿಗೆ ಒಳಗಾಗಿದ್ದ ವಯೋವೃದ್ಧ ರಾಧಾಕೃಷ್ಣ ಅವರನ್ನು ಸಂತೈಸಿ ಧೈರ್ಯ ತುಂಬಿದ್ದಾರೆ.
ಕೆಳಗೆ ಬಿದ್ದ ಪರಿಣಾಮ ರಾಧಾಕೃಷ್ಣ ಅವರ ಮುಖಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಅವರು ಪ್ರಾಣ ಭಯದ ಆಘಾತದಿಂದ ಹೊರ ಬಂದ ಮೇಲೆ ಇನ್ನೊಂದು ರೈಲಿನಲ್ಲಿ ಅವರನ್ನು ಕಳುಹಿಸಿದ್ದಾರೆ.
ಸಮಯ ಪ್ರಜ್ಞೆಯಿಂದ ಜೀವ ಕಳೆದುಕೊಳ್ಳು ತ್ತಿದ್ದ ವಯೋವೃದ್ಧನನ್ನು ರಕ್ಷಿಸಿದ ಗೃಹರಕ್ಷಕ ದಳ ಹಾಗೂ ರೈಲ್ವೆ ರಕ್ಷಣಾ ದಳದ ಸಿಬ್ಬಂದಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.