ಪೊಲೀಸರು ಅನಗತ್ಯವಾಗಿ ಹಿಂದೂ ಕಾರ್ಯಕರ್ತರಿಗೆ ಮತ್ತು ಕುಟುಂಬದ ಸದಸ್ಯರಿಗೆ ತೊಂದರೆ ನೀಡಿದರೆ ಸಹಿಸಲ್ಲ.
– ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ
ದಾವಣಗೆರೆ, ಸೆ.29- ಸಿಎಂ ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದರೇ ಮುಡಾ ತನಿಖೆಯ ಮೇಲೆ ರಾಜಕೀಯ ಪ್ರಭಾವ ಬೀಳಲಿದೆ. ಹಾಗಾಗಿ ಅವರು ಸಿಎಂ ಸ್ಥಾನಕ್ಕೆ ಕೂಡಲೇ ರಾಜಿನಾಮೆ ನೀಡಬೇಕು ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಆರೋಪ ಮುಕ್ತರಾದರೆ ಮತ್ತೆ ಸಿಎಂ ಸ್ಥಾನ ಅಲಂಕರಿಸುವುದಕ್ಕೆ ಯಾವುದೇ ತಕರಾರು ಇಲ್ಲ. ಆದರೆ ಅಲ್ಲಿಯ ತನಕ ಅವರು ಅಧಿಕಾರದಲ್ಲಿ ಇರಬಾರದು ಎಂದು ಆಗ್ರಹಿಸಿದರು.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆಗೆ ಒತ್ತಾಯಿಸಿದ್ದರು. ಅದೇ ರೀತಿ ಸಿಎಂ ಹುದ್ದೆಗೆ ಅವರು ರಾಜೀನಾಮೆ ನೀಡಲಿ ಎಂದು ಹೇಳಿದರು.
ಸಿದ್ದರಾಮಯ್ಯನವರು ಆರೋಪ ಎದುರಿಸಿದ ಹೊಸ್ತಿಲಲ್ಲೇ ಮುಡಾದ 14 ಸೈಟುಗಳನ್ನು ವಾಪಸ್ ಮಾಡಿದ್ದರೆ ಸಿಎಂ ಕುರ್ಚಿಗೆ ಕಂಟಕ ಬರುತ್ತಿರಲಿಲ್ಲ. ಇಂದು ಕಾಂಗ್ರೆಸ್ ಸರ್ಕಾರ ಜನರ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದೆ. ಹಾಗಾಗಿ ಸರ್ಕಾರ ವಿಸರ್ಜಿ ಸಲು ಮುಂದಾಗಿ, ಮತ್ತೊಮ್ಮೆ ಜನಾದೇಶದ ಸರ್ಕಾರ ರಚಿಸೋಣ ಎಂದು ಸವಾಲ್ ಎಸೆದರು.
ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ ಗಮನಿಸಿದರೆ, ರಾಜ್ಯದಲ್ಲಿ ಮುಸುಕಿನ ಗುದ್ದಾಟ ಪ್ರಾರಂಭವಾಗಿರುವುದು ಗೋಚರಿಸುತ್ತಿದೆ. ಮುಖ್ಯಮಂತ್ರಿಗಳ ಕುರ್ಚಿಗೆ ಟವೆಲ್, ಹಾಗೂ ಟಿಶ್ಯೂ ಪೇಪರ್ ಹಾಕುತ್ತಿದ್ದಾರೆ ಎಂದು ಟೀಕಿಸಿದರು.
ಪಂಚ ಗ್ಯಾರಂಟಿಗಳು ಸಂಪೂರ್ಣವಾಗಿ ವಿಫಲವಾಗಿವೆ. ಸುಳ್ಳು ಭರವಸೆ ಕೊಟ್ಟು ಸರ್ಕಾರ ರಚಿಸಿದ್ದಾರೆ. ಕಳೆದ 3-4 ತಿಂಗಳಿಂದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರು ಜನರ ಕೈಗೆ ಸಿಗುತ್ತಿಲ್ಲ. ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ ಎಂದು ದೂರಿದರು.
ಈ ವೇಳೆ ಇಡಗುಂಜಿ ಜಾಧವ್, ಶ್ರೀನಿವಾಸ್, ಮಣಿಕಂಠ, ಮಂಜುನಾಥ್, ಜಯರುದ್ರೇಶ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.