29ರಿಂದ ಕುಲಾಂತರಿ ತಳಿ ವಿರುದ್ಧ ದೊಡ್ಡ ಹೊಸೂರು ಸತ್ಯಾಗ್ರಹ

ದಾವಣಗೆರೆ, ಸೆ.27- ಕೇಂದ್ರ ಸರ್ಕಾರವು ಕುಲಾಂತರಿ ಬೀಜ ಕಾಯ್ದೆಯನ್ನು ಜಾರಿಗೊಳಿಸಬಾರದೆಂದು ಆಗ್ರಹಿಸಿ ಸೆ.29ರಿಂದ ಅ.2ರ ವರೆಗೆ ತುಮಕೂರಿನ ದೊಡ್ಡ ಹೊಸೂರಿನಲ್ಲಿ ಸತ್ಯಾಗ್ರಹ ಮಾಡಲಿದ್ದೇವೆ ಎಂದು ಗಾಂಧಿ ಸಹಜ ಬೇಸಾಯ ಆಶ್ರಮದ  ಸಂಸ್ಥಾಪಕ ಮಂಜುನಾಥ್‌ ತಿಳಿಸಿದರು. 

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ `ದೊಡ್ಡ ಹೊಸೂರು ಸತ್ಯಾಗ್ರಹ’ ನಡೆಯಲಿದ್ದು, ಮೊದಲ ದಿನ ಮಠಾಧೀಶರು, 2ನೇ ದಿನ ರೈತರು, 3ನೇ ದಿನ ಯುವಕರು ಹಾಗೂ ಕೊನೆ ದಿನ ಪ್ರಗತಿ ಪರ ಚಿಂತಕರನ್ನು ಕರೆದು ಈ ಕುಲಾಂತರಿ ಬೀಜಗಳಿಂದಾಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

ಕುಲಾಂತರಿ ಬೀಜಗಳಲ್ಲಿ ಕ್ಯಾನ್ಸರ್‌ ಕಾರಕ ಅನೇಕ ಅಂಶಗಳಿರುವುದರಿಂದ ದೇಶದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಸರ್ವೋಚ್ಛ ನ್ಯಾಯಾಲಯವು ಕುಲಾಂತರಿ ಬೀಜದ ದುಷ್ಪರಿಣಾಮದ ಬಗ್ಗೆ ಮನನ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ತೇಜಸ್ವಿ ಪಟೇಲ್‌ ಮಾತನಾಡಿ, ಈ ಹಿಂದೆ ಬಿಟಿ ಹತ್ತಿ ಬೀಜದ ವಿರುದ್ಧ ಹೋರಾಟ ಮಾಡಿದ್ದೇವೆ. ನಮ್ಮ ಹೋರಾಟ ಪ್ರಾರಂಭಿಕವಾಗಿದ್ದು, ಇದನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಲಿದ್ದೇವೆ ಎಂದು ಹೇಳಿದರು.

ಕಾಯ್ದೆ ರೂಪಿಸುವವರಿಗೆ ಈ ಕಾಯ್ದೆಗಳ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ಅವರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಿದ್ದೇವೆ ಎಂದು ತಿಳಿಸಿದರು. ಈ ವೇಳೆ ಶ್ರೀನಿವಾಸ್‌, ಲಿಂಗೇಶ್‌, ಶಂಕರ್‌, ಜಗದೀಶ್‌ ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!