ರಾಣೇಬೆನ್ನೂರು,ಆ.29- ಸೆಪ್ಟೆಂಬರ್ 7ರಂದು ಪ್ರತಿಷ್ಠಾಪನೆಯೊಂದಿಗೆ ಪ್ರಾರಂಭವಾಗುವ ಗಣಪತಿ ಹಬ್ಬ ಹಾಗೂ ಸೆಪ್ಟೆಂಬರ್ 16 ರಂದು ಆಚರಿಸುವ ಈದ್ ಮಿಲಾದ್ ಹಬ್ಬಗಳು ಸುಗಮವಾಗಿ ನಡೆ ಯಲು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.
ಹಬ್ಬ ಆಚರಣೆಗೆ ಬ್ಯಾನರ್, ಬಂಟಿಂಗ್ಸ್ ಮತ್ತು ಪ್ಲೆಕ್ಸ್ ಕಟ್ಟುವವರು ಪೊಲೀಸ್ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಪಡೆದು ತಮಗೆ ಸಂಬಂಧಿಸಿದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳಿಂದ ಅನುಮತಿ ಪಡೆಯಬೇಕು. ಅನ್ಯ ಧರ್ಮದವರ ಭಾವನೆಗಳಿಗೆ ದಕ್ಕೆಯಾಗುವ ಯಾವುದೇ ವಿಷಯಗಳು ಅವುಗಳಲ್ಲಿರಬಾರದು.
ಹೆಚ್ಚಿನ ಶಬ್ಧದ ಧ್ವನಿವರ್ಧಕ ಬಳಸಲು ಅನುಮತಿ ಪಡೆದಿರಬೇಕು. ಕೋಮು ಭಾವನೆ ಕೆರಳುವಂತಹ ಹಾಡು, ಸಂಭಾಷಣೆ, ಬಾಷಣ ಮುಂತಾದವುಗಳನ್ನು ಧ್ವನಿವರ್ಧಕದಲ್ಲಿ ಹಾಕುವಂತಿಲ್ಲ. ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಧ್ವನಿವರ್ಧಕ ಬಳಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.