ಎಐಡಿಎಸ್ಓ ಅಸಮಾಧಾನ
ದಾವಣಗೆರೆ, ಜು. 26- ಸ್ಥಳೀಯ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಿಬಂಧನೆ ಆಧಾರಿತ ಸಾಲಗಳನ್ನು ನೀಡುವ ಕೇಂದ್ರ ಸರ್ಕಾರದ ಬಜೆಟ್ ಘೋಷಣೆಯು ಆಘಾತಕಾರಿಯಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿ ನರಳುವಂತೆ ಸರ್ಕಾರವೇ ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿದೆ ಎಂದು ಎಐಡಿಎಸ್ಓ ರಾಜ್ಯ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಬಜೆಟ್ನಲ್ಲಿ, 1.48.000, ಕೋಟಿಯನ್ನು ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಗೆ ಮೀಸಲಿಡಲಾಗಿದೆ. ವಿವಿಧ ಕ್ಷೇತ್ರಗಳನ್ನು ಒಂದೇ ತೆಕ್ಕೆಯಲ್ಲಿ ಸೇರಿಸಿ ಶಿಕ್ಷಣಕ್ಕೆ ಹೆಚ್ಚಿನ ಮೊತ್ತ ನೀಡಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ತಾವೇ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಶಿಫಾರಸ್ಸಿನಂತೆ ಶೇ.6 ರಷ್ಟನ್ನೂ ಕೂಡ ಶಿಕ್ಷಣಕ್ಕೆ ನೀಡದೆ, ಶೇ.4 ಕ್ಕಿಂತ ಕಡಿಮೆ ಅನುದಾನ ನೀಡಿರುವುದು ಖಂಡನೀಯ ಎಂದು ಜಿಲ್ಲಾ ಕಾರ್ಯದರ್ಶಿ ಟಿ.ಎನ್. ಸುಮನ್ ಹೇಳಿದ್ದಾರೆ.
ಸಾಮಾನ್ಯ ಜನರ ಮೇಲಿನ ಶೈಕ್ಷಣಿಕ ವೆಚ್ಚದ ಹೊರೆ ಇಳಿಸಲು ಶುಲ್ಕ ಕಡಿಮೆ ಮಾಡುವ ಮತ್ತು ಸಾರ್ವಜನಿಕ ಅನುದಾನಿತ ಸಂಸ್ಥೆಗಳನ್ನು ಹೆಚ್ಚಿಸುವ ಬದಲು, ಶಿಕ್ಷಣದ ಮೇಲಿನ ಹೆಚ್ಚು ಶುಲ್ಕವನ್ನು ಭರಿಸಲು ಸರ್ಕಾರವು ವಿದ್ಯಾರ್ಥಿಗಳೇ ಸಾಲ ತೆಗೆದುಕೊಳ್ಳಬೇಕೆಂದು ಹೇಳುತ್ತಿದೆ. ಈ ವಿಧಾನ ಖಂಡನೀಯ.
ಸರ್ಕಾರ ಸರ್ವರಿಗೂ ಶಿಕ್ಷಣ ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ತಮ್ಮ ಕೌಶಲ್ಯ ಸಾಬೀತುಪಡಿಸಲು 20 ಲಕ್ಷ ವಿದ್ಯಾರ್ಥಿಗಳನ್ನು ಕೇಂದ್ರ ಬಜೆಟ್ ಗುರುತಿಸಿದೆ. ಸಹಜವಾಗಿ ಕೌಶಲ್ಯಗಳು ಅವಶ್ಯ. ಆದರೆ ಉದ್ಯೋಗ ಸೃಷ್ಠಿ ಇಲ್ಲದೇ ಕೌಶಲ್ಯಗಳಿಗೆ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.
ದೇಶಾದ್ಯಂತ ಇರುವ ಕೋಚಿಂಗ್ ಮಾಫಿಯಾ ತಡೆಯಲು ಯಾವುದೇ ಕ್ರಮ ಕೈಗೊಳ್ಳುವ ಬಗ್ಗೆ ಬಜೆಟ್ನಲ್ಲಿ ಘೋಷಿಸಿಲ್ಲ. ಉದ್ಯೋಗಗಳನ್ನು ಸೃಷ್ಟಿಸದೆಯೇ ಸಾಲ, ಅಗ್ಗದ ಶ್ರಮ ಮತ್ತು ಕೇವಲ ಕೌಶಲ್ಯದ ಮೇಲೆ ಕೇಂದ್ರೀಕರಿಸಿದ ಕೇಂದ್ರ ಬಜೆಟ್ ಈಗಾಗಲೇ ಆಳವಾದ ಬಿಕ್ಕಟ್ಟಿನ ಮಧ್ಯೆ ಶಿಕ್ಷಣದ ಮೇಲಿನ ವೆಚ್ಚದ ಹೊರೆಯಿಂದ ಬಳಲುತ್ತಿರುವ ವಿದ್ಯಾರ್ಥಿ ಸಮೂಹಕ್ಕೆ ಗಾಯದ ಮೇಲೆ ಬರೆ ಎಳದಂತೆಯೇ ಆಗಿದೆ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರವು ಶಿಕ್ಷಣಕ್ಕಾಗಿ ಮೀಸಲಿಟ್ಟಿರುವ ಹಣವನ್ನು ಸಾರ್ವಜನಿಕ ಶಿಕ್ಷಣ ಬಲಪಡಿಸಲು ಮತ್ತು ಎಲ್ಲರಿಗೂ ಶಿಕ್ಷಣ ದೊರಕುವಂತೆ ಖಾತ್ರಿಪಡಿಸಲು ವಿನಿಯೋಗಿಸಬೇಕೆಂದು ಎಐಡಿಎಸ್ಓ ಆಗ್ರಹಿಸಿದೆ.