ಕಲಾಕುಂಚದಿಂದ ನಗರದಲ್ಲಿ ಇಂದು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ

ದಾವಣಗೆರೆ, ಜು. 26- ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಮತ್ತು ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ  2023-24 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವು ನಾಳೆ ದಿನಾಂಕ 27 ಮತ್ತು 28 ರಂದು ನಡೆಯಲಿದೆ ಎಂದು ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಥಮ ಭಾಷೆ ಕನ್ನಡದಲ್ಲಿ 125 ಕ್ಕೆ 125 ಪರಿಪೂರ್ಣ ಅಂಕ ಪಡೆದ ಮಕ್ಕಳಿಗೆ ರಾಜ್ಯ ಮಟ್ಟದ `ಕನ್ನಡ ಕೌಸ್ತುಭ’ ರಾಜ್ಯ ಪ್ರಶಸ್ತಿ, ಒಟ್ಟು ಅಂಕ 625ಕ್ಕೆ 600 ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ `ಸರಸ್ವತಿ ಪುರಸ್ಕಾರ’ ರಾಜ್ಯ ಪ್ರಶಸ್ತಿ, 125ಕ್ಕೆ 120 ರಿಂದ 124 ರವರೆಗೆ ಅಂಕ ಪಡೆದ ಮಕ್ಕಳಿಗೆ `ಕನ್ನಡ ಕುವರ-ಕುವರಿ’ ಜಿಲ್ಲಾ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ ಎಂದರು.

ದಿನಾಂಕ 27ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದ ಬೃಹತ್ ವೇದಿಕೆಯಲ್ಲಿ ಭಾರತದ ಸರ್ವೋಚ್ಛ ನ್ಯಾಯಾಧೀಶರೂ, ನಿವೃತ್ತ ಲೋಕಾಯುಕ್ತರೂ ಆದ ಎನ್.ಸಂತೋಷ್ ಹೆಗ್ಡೆ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. 

ಸಂಸ್ಥೆಯ ಅಧ್ಯಕ್ಷ  ಕೆ.ಎಚ್.ಮಂಜುನಾಥ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲಾಕುಂಚ ಕೇರಳದ ಗಡಿನಾಡ ಶಾಖೆಯ ಅಧ್ಯಕ್ಷರಾದ ಜಯಲಕ್ಷ್ಮಿ ಕಾರಂತ್, ದಾವಣಗೆರೆಯ ಶ್ರೀಮತಿ ಮೋತಿ ಗೌರಮ್ಮ ಮೋತಿ ಪಿ.ರಾಮರಾವ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮೋತಿ ಪರಮೇಶ್ವರರಾವ್ ಗೌರವ ಉಪಸ್ಥಿತಿಯಲ್ಲಿ ಕಲಾಕುಂಚ ಗೌರವ ಸಲಹೆಗಾರ ಬಿ.ಶಾಂತಪ್ಪ ಪೂಜಾರಿ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ಆಗಮಿಸಲಿದ್ದಾರೆ.

ದಿನಾಂಕ 28 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಜನಸಿರಿ ಫೌಂಡೇಷನ್ ಸಂಸ್ಥಾಪಕರೂ, ಸಾಹಿತಿಗಳಾದ ನಾಗಲೇಖ ಸಮಾರಂಭ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಕಲಾಕುಂಚ ಕೇರಳದ ಗಡಿನಾಡ ಶಾಖೆಯ ಸಹ ಕಾರ್ಯದರ್ಶಿ, ಹಿರಿಯ ಸಾಹಿತಿ ಜಯಲಕ್ಷ್ಮಿ ಕಾರಂತ್, ರಾಮಚಂದ್ರ ಹೊಳ್ಳ, ಬೆಂಗಳೂರಿನ ದೂರದರ್ಶನ ಕೇಂದ್ರದ ಚಂದನ ವಾಹಿನಿಯ ನಿರೂಪಕ  ಹೆಚ್.ರಾಜಶೇಖರ ಭಾಗವಹಿಸಲಿದ್ದಾರೆ. 

ಕರ್ನಾಟಕದಲ್ಲಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ಕ್ಕೆ 625 ಪರಿಪೂರ್ಣ ಅಂಕ ಪಡೆದ ಶೈಕ್ಷಣಿಕ ಯುವ ಸಾಧಕಿ, ಬೆಂಗಳೂರಿನ ಬಿ.ಎನ್.ಆರ್. ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡಿದ ಭಾವನ ಟಿ.ಎಸ್. ಆಗಮಿಸಲಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ  ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಅಧ್ಯಕ್ಷ ಡಾ. ನಾಗೇಶ್ ಸಂಜೀವ ಕಿಣಿ, ಕಲಾಕುಂಚ ವಿವಿಧ ವಿಭಾಗಗಳ ಪದಾಧಿಕಾರಿಗಳಾದ ಕೆ.ಹೆಚ್. ಮಂಜುನಾಥ್, ಕೆ.ಸಿ.ಉಮೇಶ್, ಜ್ಯೋತಿ ಗಣೇಶ್‌ಶೆಣೈ, ವಾಸಂತಿ ಮಂಜುನಾಥ್, ಶಾಂತಪ್ಪ ಪೂಜಾರಿ, ಹೇಮಾ ಶಾಂತಪ್ಪ ಪೂಜಾರಿ  ಉಪಸ್ಥಿತರಿದ್ದರು.

error: Content is protected !!