ದಾವಣಗೆರೆ, ಜು.19- ಜಿಲ್ಲೆಯಲ್ಲಿ ಇದುವರೆಗೂ ಮಳೆ ಪ್ರಮಾಣ ಕಡಿಮೆ ಇದ್ದು, ಕಳೆದ ಕೆಲ ದಿವಸಗಳಿಂದ ಚೆನ್ನಾಗಿ ಮಳೆ ಆಗುತ್ತಿದೆ. ಮಳೆ ಮುಂದುವರಿಯುವ ಸಾಧ್ಯತೆ ಕಡಿಮೆ ಆಗುವ ಸಾಧ್ಯತೆ ಹಿನ್ನೆಲೆ ಯಲ್ಲಿ, ಬೆಳೆಗಳ ನಿರ್ವಹಣೆ ಕುರಿತು ಕೆಲವು ಸಲಹೆಗಳನ್ನು ಕೃಷಿ ಇಲಾಖೆ ನೀಡಿದೆ.
* ಮೇಲು ಗೊಬ್ಬರಗಳನ್ನು ಬೆಳೆಯ ಪಕ್ಕ ಬುಡದಿಂದ 4 ಇಂಚು ದೂರ ಮತ್ತು 4 ಇಂಚು ಆಳದಲ್ಲಿ ಕೊಟ್ಟು ಮಣ್ಣಿನಲ್ಲಿ ಮುಚ್ಚಬೇಕು. ಯಾವುದೇ ಕಾರಣಕ್ಕೂ ಯೂರಿಯಾ ಅಥವಾ ಇನ್ನಾವುದೇ ಗೊಬ್ಬರವನ್ನು ಎರಚಬಾರದು. ಯೂರಿಯ ಬಳಕೆಯ ಪ್ರಮಾಣ ಎಕರೆಗೆ 25 ಕೆಜಿ ಮೀರಬಾರದು. ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರವನ್ನು ಬಳಕೆ ಮಾಡಿದಲ್ಲಿ, ತದನಂತರದ ದಿವಸಗಳಲ್ಲಿ ಮಳೆ ಕೊರತೆಯಾದರೆ ಬೆಳೆಗಳಿಗೆ ತೀವ್ರತರವಾದ ತೊದರೆಯುಂಟಾಗುವುದು
* ಕೇವಲ ಯೂರಿಯ ಬಳಕೆಯಿಂದ ಬೆಳೆಗಳು ಶೀತಬಾಧೆಯಿಂದ ಚೇತರಿಸಿಕೊಳ್ಳಲಾರವು.
* ಈಗ ಬರುತ್ತಿರುವ ಮಳೆಯನ್ನು ಸದುಪಯೋಗಪಡಿಸಿಕೊಳ್ಳಲು, ಬೆಳೆಯ ಹಂತ ನೋಡಿಕೊಂಡು ಪ್ರತಿ ಲೀಟರ್ ನೀರಿಗೆ 5-8 ಗ್ರಾಂ 19:19:19 ನ್ನು ಮತ್ತು 5 ಮಿಲೀ ಲಘು ಪೋಷಕಾಂಶ ಮಿಶ್ರಣ ಬೆರೆಸಿಕೊಂಡು ಸಿಂಪಡಣೆ ಮಾಡಬೇಕು. ಕೇವಲ ಲಘು ಪೋಷಕಾಂಶ ಸಿಂಪಡಣೆ ಮಾಡದೇ, ಪ್ರಧಾನ ಪೋಷಕಾಂಶಗಳ ಸಿಂಪಡಣೆ ಸಹ ಅಗತ್ಯ.
* 45 ದಿನಗಳ ಹಂತದ ಮೆಕ್ಕೆಜೋಳ ಬೆಳೆಯಲ್ಲಿ ಈಗಾಗಲೇ ಗಟ್ಟಿ ಗೊಬ್ಬರ ಮತ್ತು ಮೇಲು ಗೊಬ್ಬರಗಳನ್ನು ಕೊಟ್ಟಾಗಿ ದ್ದರೆ, ನ್ಯಾನೋ ಯೂರಿಯಾ 2.5 ಮಿಲಿ ಯನ್ನು ಪ್ರತಿ ಲೀಟರ್ ನೀರಿಗೆ ಸೇರಿಸಿದ ದ್ರಾವಣವನ್ನು ಸಿಂಪಡಿಸುವು ದರಿಂದ ಬೆಳೆ ಉತ್ತಮವಾಗಿ ಚೇತರಿಸಿಕೊಳ್ಳುವುದು.
* ಎಲೆ ತಿನ್ನುವ ಕೀಟ ಬಾಧೆ ಇದ್ದು, ಚಿಕ್ಕ ಹುಳುಗಳು ಇದ್ದರೆ 0.5 ಗ್ರಾಂ, ಇಮಾಮೆಕ್ಟಿನ್ ಬೆಂಜೋಯೇಟ್ ದೊಡ್ಡ ಹುಳುಗಳು ಇದ್ದರೆ ಕ್ಲೋರಂಟ್ರಿನಿಲಿಪೋಲ್ 0.4 ಮಿಲೀ ಪ್ರತಿ ಲೀ ನೀರಿಗೆ ಬೆರೆಸಿಕೊಂಡು ಸಿಂಪರಣೆ ಮಾಡಬೇಕು. ಮಳೆ ಕಡಿಮೆಯಾಗಿ ಮೆಕ್ಕೆಜೋಳದಲ್ಲಿ ಲದ್ದಿ ಹುಳು ಬಾಧೆ ಮುಂದುವರೆದರೆ, ಪ್ರತಿಯೊಂದು ಸುಳಿ ತುಂಬುವಂತೆ ಮತ್ತು ಸಮಗ್ರವಾಗಿ ಇಮಾಮೆಕ್ಟಿನ್ ಬೆಂಜೋ ಯೇಟ್ ಅಥವಾ ಕ್ಲೋರಂಟ್ರಿನಿಲಿಪೋಲ್ ಸಿಂಪಡಣೆ ಮಾಡಬೇಕು.
* ಹೆಚ್ಚಿನ ತೇವದಿಂದ ಹತ್ತಿ ಮತ್ತು ಶೇಂಗಾ ಬೆಳೆಯಲ್ಲಿ ಬುಡ ಕೊಳೆ ರೋಗ (ಗಿಡಗಳು ಬಾಡುವುದು) ಕಂಡು ಬಂದಲ್ಲಿ, ಗಿಡಗಳ ಬುಡಕ್ಕೆ ಕಾರ್ಬಡೈಜಿಂ 3 ಗ್ರಾಂ ಪ್ರತಿ ಲೀ ನೀರಿಗೆ ಸೇರಿಸಿ ತಯಾರಿಸಿದ ದ್ರಾವಣವನ್ನು ಸುರಿಯಬೇಕು.
* ಒಟ್ಟಾರೆಯಾಗಿ ಹೊಲದಲ್ಲಿ ನೀರು ನಿಲ್ಲದಂತೆ, ಸರಾಗವಾಗಿ ಹರಿದು ಹೋಗುವಂತೆ ಕ್ರಮಗಳನ್ನು ಅನುಸರಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಕೋರಿದ್ದಾರೆ.