ಹರಿಹರ ತಾಲ್ಲೂಕಿನಲ್ಲಿ ಬೆಳೆಗೆ ಲದ್ದಿ ಹುಳು ಭಾದೆ

ಹರಿಹರ,ಜು.7-  ತಾಲ್ಲೂಕಿನಲ್ಲಿ ಕಳೆದ ತಿಂಗಳಿನಿಂದ ಮಳೆಯಾಗುತ್ತಲಿದ್ದು, ರೈತರು ಮುಂಗಾರು ಬೆಳೆಗಳಾದ ಮೆಕ್ಕೆಜೋಳ, ಜೋಳ, ಅಲಸಂದೆ, ಸೋಯಾಬೀನ್ ಮತ್ತು ತೊಗರಿ ಬೆಳೆಗಳನ್ನು ಬಿತ್ತನೆ ಮಾಡಿರುತ್ತಾರೆ. ಬೆಳೆಗಳು 15-30 ದಿನಗಳ ಬೆಳೆಗಳಿದ್ದು, ಬೆಳವಣಿಗೆ ಹಂತದಲ್ಲಿರುತ್ತವೆ. ರೈತರ ತಾಕುಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದಾಗ ಸೈನಿಕ ಹುಳುಗಳ ಬಾಧೆ ಅಲ್ಲಲ್ಲಿ ಕಂಡು ಬಂದಿರುತ್ತದೆ.  ಹತೋಟಿ ಕ್ರಮಗಳನ್ನು ಕೈಗೊಳ್ಳಲು ರೈತರಿಗೆ ಇಲಾಖೆ ಮಾಹಿತಿ ನೀಡಿದೆ. 

ಸೈನಿಕ ಹುಳು ಶೇ.10ರಷ್ಟು (ಪ್ರತಿ 100 ಗಿಡಗಳಿಗೆ 10 ಗಿಡಗಳು) ಹಾನಿಯಾಗಿದ್ದಲ್ಲಿ ಶೇ.5ರ ಬೇವಿನ ಕಷಾಯ (ಅಜಾಡಿರೆಕ್ಟಿನ್ 1500 ಪಿಪಿಎಂ) 5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಲದ್ದಿ ಹುಳುವಿನಿಂದ ಶೇ.20ರಷ್ಟು ಹಾನಿಯಾಗಿದ್ದಲ್ಲಿ ಎಮಾಮೆ ಕ್ಟಿನ್ ಬೆಂಜೋಯೇಟ್ 5% ಎಸ್.ಜಿ. ಅನ್ನು 0.4 ಗ್ರಾಂನಂತೆ ಅಥವಾ ಸ್ಪೈನೋಸಾಡ್ 45 ಎಸ್.ಸಿ. ಅನ್ನು 0.3 ಮಿ.ಲೀ ಅಥವಾ ಥೈರೋಡಿಕಾರ್ಬ ಅನ್ನು 2ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ,  ಮುಂಜಾನೆ ಮತ್ತು ಸಾಯಂಕಾಲ ಸಿಂಪರಣೆ ಮಾಡಬೇಕು.  

ಕೀಟನಾಶಕ ಬಳಕೆ : 10ಕೆ.ಜಿ ಗೋಧಿ ತೌಡು ಅಥವಾ ಅಕ್ಕಿ ತೌಡಿಗೆ 1 ಕೆ.ಜಿ ಬೆಲ್ಲ ಸ್ವಲ್ಪ  ನೀರನ್ನು ಬೆರೆಸಿಟ್ಟು ಮಾರನೇ ದಿನ 100 ಗ್ರಾಂ ಥೈಯೋಡಿಕಾರ್ಬ (ಪ್ರತಿ ಕೆ.ಜಿ. ಗೋಧಿ ತೌಡು ಅಥವಾ ಅಕ್ಕಿ ತೌಡಿಗೆ 10 ಗ್ರಾಂ.ನಂತೆ) ಕೀಟನಾಶಕ ಮಿಶ್ರಣ ಮಾಡಿ ಬೆಳೆಯ ಸುಳಿಯಲ್ಲಿ   ಬೀಳುವಂತೆ ಸಿಂಪರಣೆ ಮಾಡಬೇಕು. ಕೀಟನಾಶಕ ಸಿಂಪ ರಣೆ ಮಾಡುವಾಗ ಕಡ್ಡಾಯವಾಗಿ ಸುರಕ್ಷತಾ ಕವಚಗಳನ್ನು ಬಳಸಿ, ಸಿಂಪರಣಾ ದ್ರಾವಣ ದೇಹದ ಮೇಲೆ ಬೀಳದಂತೆ ಹಾಗೂ ಉಸಿರಾಟದ ಮೂಲಕ ದೇಹ ಸೇರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿರುವ ಸಹಾಯಕ ಕೃಷಿ ನಿರ್ದೇಶಕರು,   ಹೆಚ್ಚಿನ ಮಾಹಿತಿಗಾಗಿ ಮತ್ತು ರಿಯಾಯತಿ ದರದಲ್ಲಿ ಕೀಟನಾಶಕಗಳಿಗಾಗಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. 

error: Content is protected !!