ದಾವಣಗೆರೆ, ಜೂ.28- 2014ರಿಂದ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇಂದಿರಾಗಾಂಧಿ ಅವರ ಘೋಷಿತ ತುರ್ತು ಪರಿಸ್ಥಿತಿಗಿಂತ ಮೋದಿಯವರ ಅಘೋಷಿತ ತುರ್ತು ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಟೀಕಿಸಿದ್ದಾರೆ.
ಇಂದಿರಾಗಾಂಧಿ ಅವರು ಜಾರಿಗೆ ತಂದ ತುರ್ತು ಪರಿಸ್ಥಿತಿ ಅವರ ರಾಜಕೀಯ ವಿರೋಧಿಗಳಿಗೆ ಸ್ವಲ್ಪ ತೊಂದರೆಯಾಯಿತು. ಆದರೆ ದೇಶದ ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದಿದ್ದಾರೆ.
ದೇಶದ ಬಡಜನರಿಗೆ ತುರ್ತು ಪರಿಸ್ಥಿತಿ ಸುವರ್ಣ ಕಾಲವಾಗಿತ್ತು. ಬಡಜನರು ಸಾಲ ಸೋಲ ಮಾಡಿ ತಮ್ಮ ಆಸ್ತಿ ಪಾಸ್ತಿ, ಪಾತ್ರೆ, ಪಗಡೆಗಳನ್ನು ಲೇವಾದೇವಿಗಾರರಿಗೆ ಸಾಲಕ್ಕೆ ಅಡವಿಟ್ಟಿದ್ದರು. ತುರ್ತು ಪರಿಸ್ಥಿತಿ ಜಾರಿಯಾದ ಕಾರಣ ತಮ್ಮ ಆಸ್ತಿ ಪಾಸ್ತಿ, ಪಾತ್ರೆ, ಪಗಡೆ ಇತರೆ ವಸ್ತುಗಳನ್ನು ಪುಕ್ಕಟೆಯಾಗಿ ವಾಪಾಸ್ ಪಡೆದರು ಎಂದು ಹೇಳಿದ್ದಾರೆ. 20 ಅಂಶಗಳ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಗೆ ಬಂತು. ದೇಶದ ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆಯಾಯಿತು. ದೇಶದ ರಫ್ತು ಜಾಸ್ತಿಯಾಗಿ. ವಿದೇಶಿ ಹೂಡಿಕೆಯಲ್ಲಿ ಹೆಚ್ಚಳ ಕಂಡಿತು ಮತ್ತು ದೇಶದಲ್ಲಿ ಹಿಂದೂ-ಮುಸ್ಲಿಮರು ಕೋಮು ಸೌಹಾರ್ದತೆಗೆ ಒತ್ತು ನೀಡಿದರು ಎಂದು ತಿಳಿಸಿದ್ದಾರೆ.