ಸಾಣೇಹಳ್ಳಿ, ಜೂ.23- ಮನುಷ್ಯನು ಆರೋಗ್ಯ ಮತ್ತು ಶಾಂತಿಯಿಂದ ಇರಬೇಕೆಂದರೆ ಯೋಗ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀಮಠದ ಶಾಲಾ ಆವರಣದಲ್ಲಿ ಶುಕ್ರವಾರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಯೋಗ ಬಾಹ್ಯ ಪ್ರದರ್ಶನವಲ್ಲ, ಅಂತರ್ ದರ್ಶನಕ್ಕೆ ಸ್ಫೂರ್ತಿಯಾಗಬೇಕು. ಈ ನಿಟ್ಟಿನಲ್ಲಿ ದೇಶ, ಭಾಷೆ, ಲಿಂಗ, ಜಾತಿ-ಧರ್ಮ ಮತ್ತು ರಾಜಕೀಯವನ್ನು ಮೀರಿ ಎಲ್ಲರೂ ಯೋಗದ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಯೋಗದಿಂದ ಬುದ್ಧಿ, ಮನಸ್ಸು, ಭಾವನೆಗಳ ಮೇಲೆ ಹತೋಟಿ ಸಾಧಿಸಬಹುದು ಮತ್ತು ವ್ಯಕ್ತಿಗತ ಶುದ್ಧಿಯ ಜತೆಗೆ ವಿಶ್ವಶಾಂತಿಯೂ ಸ್ಥಾಪಿತವಾಗಲಿದೆ ಎಂದರು.
ಬಸವಾದಿ ಶಿವಶರಣರು ಭಕ್ತಿಯೋಗ, ಶಿವಯೋಗ, ಜ್ಞಾನಯೋಗ, ಕರ್ಮಯೋಗಗಳ ಮೂಲಕ ಲಿಂಗಾಂಗ ಸಾಮರಸ್ಯದಲ್ಲೇ ಯೋಗ ಕಂಡುಕೊಂಡಿದ್ದರು ಎಂದು ಹೇಳಿದರು.
ಮನಸ್ಸನ್ನು ಹತೋಟಿಯಲ್ಲಿಡಲು ಯೋಗದಿಂದ ಸಾಧ್ಯ. ಯೋಗ ಮತ್ತು ಆಸನ ಎರಡೂ ಸೇರಿದಾಗಲೇ ವ್ಯಕ್ತಿಯ ವ್ಯಕ್ತಿತ್ವದ ವಿಕಾಸವಾಗಲಿದೆ ಎಂದು ಹೇಳಿದರು.
ಯೋಗಕ್ಕೆ ಪೂರಕವಾಗಿರುವುದು ಇಷ್ಟಲಿಂಗ ದೀಕ್ಷೆ. ಈ ನಿಟ್ಟಿನಲ್ಲಿ ಮಕ್ಕಳು ಉತ್ತಮ ಅಂಕ ಗಳಿಕೆ ಹಾಗೂ ಸಂಸ್ಕಾರವಂತರು ಆಗಬೇಕೆಂದರೆ ಇಷ್ಟಲಿಂಗ ದೀಕ್ಷೆ ಪಡೆದುಕೊಳ್ಳಬೇಕು ಎಂದರು.
ಪ್ರತಿ ತಿಂಗಳು 1ನೇ ತಾರೀಖಿನಂದು ಶ್ರೀಮಠದ ಬಸವ ಮಹಾಮನೆಯಲ್ಲಿ ಇಷ್ಟಲಿಂಗ ದೀಕ್ಷೆ ನೆರವೇರಲಿದೆ. ಆಸಕ್ತರು ಇಷ್ಟಲಿಂಗ ದೀಕ್ಷಾ ಸಂಸ್ಕಾರ ಪಡೆದು ಕೊಳ್ಳಬಹುದು ಎಂದು ತಿಳಿಸಿದರು.