ಮಲೇಬೆನ್ನೂರು, ಮೇ 14 – ಹೊಳೆಸಿರಿಗೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸೋಮವಾರ ಗ್ರಾಮದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಮಕ್ಕಳಿಗೆ ಜಂತು ಹುಳುಗಳ ಮಾತ್ರೆ ಹಾಕುವ ಮೂಲಕ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಟಿಹೆಚ್ಓ ಡಾ. ಅಬ್ದುಲ್ ಖಾದರ್ ಅವರು, 1 ರಿಂದ 19 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೂ ಜಂತು ಹುಳುಗಳ ಮಾತ್ರೆಯನ್ನು ಕಡ್ಡಾಯವಾಗಿ ಹಾಕಲು ತಿಳಿಸಿದರು. ಜಂತುಹುಳುಗಳನ್ನು ಜಂತುಹುಳು ನಾಶಕದಿಂದ ನಿವಾರಣೆ ಮಾಡುವುದಷ್ಟೇ ಅಲ್ಲದೇ, ಇತರೆ ಆಚರಣೆಗಳ ಮೂಲಕ ನಿಯಂತ್ರಿಸಬಹುದು. ನಿಮ್ಮ ಊರು, ಕೇರಿಗಳನ್ನು ಮತ್ತು ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಯಾವಾಗಲೂ ಶುದ್ಧ ನೀರನ್ನು ಕುಡಿಯಿರಿ, ಬರಿಗಾಲಿನಲ್ಲಿ ನಡೆಯಬೇಡಿ, ಚಪ್ಪಲಿಗ ಳನ್ನು ಧರಿಸಿ, ಆಹಾರವನ್ನು ಮುಚ್ಚಿಡಿ, ಬಯಲಿನಲ್ಲಿ ಮಲ ವಿಸರ್ಜನೆ ಮಾಡಬೇಡಿ, ಶೌಚಾಲಯವನ್ನು ಬಳಸಿ, ಹಣ್ಣು ಮತ್ತು ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆದು ಬಳಸಬೇಕು. ಆಹಾರ ಸೇವಿ ಸುವ ಮೊದಲು ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಿ ಎಂದು ಡಾ. ಖಾದರ್ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಚೇತನ್, ತಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ, ಆರೋಗ್ಯ ಸುರಕ್ಷಣಾಧಿಕಾರಿ ಆಶಾರಾಣಿ, ಆಶಾ ಕಾರ್ಯಕರ್ತೆಯರಾದ ಮಾಲಾಶ್ರೀ, ನೀಲಾಂಬಿಕ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.