ಶಾಶ್ವತ ಅಭಿವೃದ್ಧಿಗಾಗಿ ಪ್ರಣಾಳಿಕೆ ಸಿದ್ಧಪಡಿಸಿರುವೆ ಹರಿಹರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ರೋಡ್ ಷೋ

ಶಾಶ್ವತ ಅಭಿವೃದ್ಧಿಗಾಗಿ ಪ್ರಣಾಳಿಕೆ ಸಿದ್ಧಪಡಿಸಿರುವೆ  ಹರಿಹರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ರೋಡ್ ಷೋ

ಹರಿಹರ, ಮೇ 3-  ಕಳೆದ ಹಲವಾರು ವರ್ಷಗಳಿಂದ ದಾವಣಗೆರೆ ಜಿಲ್ಲೆಯಲ್ಲಿ ಸಂಸದರು ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ, ಶೂನ್ಯ ಸಾಧನೆ ಮಾಡಿದ್ದು, ಜಿಲ್ಲೆಯ ಜನರು ಅರಿತಿದ್ದು, ಆದ್ದರಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ನನಗೆ ಬಾರಿ ಬಹುಮತದೊಂದಿಗೆ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವನ್ನು ಹೊಂದಿರುವುದಾಗಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದಲ್ಲಿ ಕಾಂಗ್ರೆಸ್ ವತಿಯಿಂದ ಇಂದು ನಡೆದ ರೋಡ್ ಷೋನಲ್ಲಿ ಭಾಗವಹಿಸಿ ಅವರು ಮಾತನಾಡಿದರು.  

ದಾವಣಗೆರೆ ಜಿಲ್ಲೆಯಲ್ಲಿ ಸಂಸದರು ಹಲವು ಬಾರಿ ಗೆದ್ದರು. ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡದಿರುವುದು ಮತ್ತು ತಮ್ಮ ಅಧಿಕಾರದ ಅವಧಿಯಲ್ಲಿ ಜಿಲ್ಲೆಯ ಜನತೆಯ ಕಷ್ಟಗಳ ಬಗ್ಗೆ ಸಂಸತ್ತು ಭವನದಲ್ಲಿ ಧ್ವನಿ ಎತ್ತದೇ ಇರುವುದನ್ನು  ಜಿಲ್ಲೆಯ ಜನರು ಅರಿತುಕೊಂಡಿದ್ದಾರೆ. 

ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರ ಕೂಡ ತಮ್ಮ ಆಡಳಿತ ಅವಧಿಯಲ್ಲಿ ದಿನ ಬಳಕೆ ವಸ್ತುಗಳಾದ ದಿನಸಿ ಪದಾರ್ಥಗಳು, ಸಿಲಿಂಡರ್, ಪೆಟ್ರೋಲ್, ಡೀಸೆಲ್‌, ಗೊಬ್ಬರ, ಔಷಧಿ ಸೇರಿದಂತೆ ಎಲ್ಲವನ್ನೂ ಗಗನಕ್ಕೆ ಏರಿಸುತ್ತಾ ಬಂದಿದ್ದು, ಇತ್ತ ದುಡಿಯುವ ವರ್ಗದವರಿಗೆ ಉದ್ಯೋಗವನ್ನೂ ನೀಡದೇ, ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಲು ಆಗದೇ ಬರಿ ಸುಳ್ಳು ಹೇಳಿಕೊಂಡು ಬಂದು ದೇಶದ ಜನರ ನೆಮ್ಮದಿ ಹಾಳು ಮಾಡಿದರು ಎಂದು ಹೇಳಿದರು.

ನಾನು ಕಳೆದ ಒಂದೂವರೆ ತಿಂಗಳಿಂದ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಓಡಾಡಿದ್ದು, ಅದರಲ್ಲಿ ಹರಿಹರ ನಗರಕ್ಕೆ ಸಾಕಷ್ಟು ಭೇಟಿಕೊಟ್ಟು ಇಲ್ಲಿನ ಸಮಸ್ಯೆಗಳನ್ನು ಅರಿತಿರುವೆ. ನಾನು ಗೆದ್ದು ಸಂಸದೆ ಆದರೆ, ಕ್ಷೇತ್ರದ ಅಭಿವೃದ್ಧಿಗೆ ಒಬ್ಬ ಶಾಸಕರು ಹೇಗೆ ಅಭಿವೃದ್ಧಿ ಕಾರ್ಯಗಳಿಗೆ ಒತ್ತನ್ನು ನೀಡಲಾಗುತ್ತದೆ. 

ಆ ತರಹದ  ಮಾದರಿಯಲ್ಲಿ ಹರಿಹರ ತಾಲ್ಲೂಕು ಅಭಿವೃದ್ಧಿ ಪಡಿಸಲಾಗುತ್ತದೆ. ಜೊತೆಗೆ ಪ್ರಮುಖವಾಗಿ ಕುಡಿಯುವ ನೀರಿನ ಶೇಖರಣಾ ಘಟಕ, ಸುಸಜ್ಜಿತ ರಸ್ತೆ, ಕೈಗಾರಿಕೆ, ಬೈರನಪಾದ ಏತ ನೀರಾವರಿ ಯೋಜನೆ ಹೀಗೆ ಹತ್ತು ಹಲವು ಬಗೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿಕ್ಕೆ ನಾನೇ ಸ್ವಂತ ಅಭಿವೃದ್ಧಿ ಚಿಂತನೆ ಮಾಡಿ, ಪ್ರಣಾಳಿಕೆ ಸಿದ್ಧ ಮಾಡಿಕೊಂಡಿರುವೆ ಎಂದು ಹೇಳಿದರು.  

ಮಾಜಿ ಶಾಸಕ ಎಸ್.ರಾಮಪ್ಪ ಮಾತನಾಡಿ,   ಬಿಜೆಪಿ ಹತ್ತು ವರ್ಷಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. 25 ವರ್ಷದಲ್ಲಿ ದಾವಣಗೆರೆ ಸಂಸದರೂ ಕೂಡ ಏನು ಅಭಿವೃದ್ಧಿ ಮಾಡಿಲ್ಲ. ದೇಶದ ಶ್ರೀಮಂತ ವರ್ಗದವರಿಗೆ ಮನ್ನಣೆಯನ್ನು ಕೊಡುವಂತಹ ಬಿಜೆಪಿ ಸರ್ಕಾರಕ್ಕೆ ಮತವನ್ನು ಕೊಡದೇ ನುಡಿದಂತೆ ನಡೆದ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ವಕ್ತಾರರಾದ ಯು.ಟಿ. ಪರ್ಜಾನಾ ಮಾತನಾಡಿ, ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ಶಕ್ತಿಯನ್ನು ತುಂಬುವ ಕೆಲಸವನ್ನು ಮಾಡಿದ್ದು, ಗ್ಯಾರಂಟಿ ಯೋಜನೆಗಳು ಸಮಾಜಕ್ಕೆ ನೀಡಿದ ಆಕ್ಸಿಜನ್ ಇದ್ದಂತೆ ಆಗಿದೆ. ಗುಜರಾತಿನಲ್ಲಿ ಬೋಗಸ್ ಮಾಡಲ್ ಮಾದರಿ ನೋಡಿ ಜನರು ಬೇಸತ್ ಹೋಗಿದ್ದಾರೆ. ಆಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ದೇಶವನ್ನು ಉಳಿಸುವಂತಹ ಕೆಲಸವನ್ನು ಮತದಾರರು ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರು ಐದು ಚುನಾವಣೆಯಲ್ಲಿ ತೊಡಗಿಸಿಕೊಂಡು ಪಕ್ಷದ ಪರವಾಗಿ ಕೆಲಸವನ್ನು ಮಾಡಿದ್ದಾರೆ. ಜೊತೆಗೆ ಆರೋಗ್ಯ ರಕ್ಷಣೆ ಜೊತೆಗೆ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. 

ಹರಿಹರ ನಗರದಲ್ಲಿ ಕೂಡ ಡೈಯಾಲಿಸಿಸ್ ಕೇಂದ್ರ ಸ್ಥಾಪನೆ ಮಾಡಲಿಕ್ಕೆ ಮುಂದಾಗಿದ್ದಾರೆ. ಜೊತೆಗೆ ಇನ್ನೂ ಸಾಕಷ್ಟು ಯೋಜನೆಗಳನ್ನು ರೂಪಿಸಲು ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಹೆಚ್ಚು ಮತವನ್ನು ಹಾಕುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಹೇಳಿದರು.

ಈ ಸಂದರ್ಭದಲ್ಲಿ ಗುತ್ತೂರು ಜಿ.ಬಿ.ಹಾಲೇಶಗೌಡ್ರು, ನಿಖಿಲ್ ಕೊಂಡಜ್ಜಿ,  ಬಿ.ರೇವಣಸಿದ್ದಪ್ಪ, ಎಂ‌. ನಾಗೇಂದ್ರಪ್ಪ, ಟಿ.ಜೆ.ಮುರುಗೇಶಪ್ಪ, ಶಂಕರ್ ಖಟಾವ್ಕಾರ್, ಎ.ಬಿ.ವಿಜಯಕುಮಾರ್, ಕೆ.ಜಿ.ಸಿದ್ದೇಶ್,  ಎಸ್.ಎಂ.ವಸಂತ್, ರೇವಣಸಿದ್ದಪ್ಪ ಅಮರಾವತಿ, ಸಿ.ಎನ್.ಹುಲಿಗೇಶ್, ರಜನಿಕಾಂತ್, ಕೆ.ಬಿ.ರಾಜಶೇಖರ್, ಮಹಮ್ಮದ್ ಸಿಗ್ಬತ್ ಉಲ್ಲಾ, ಎಲ್.ಬಿ. ಹನುಮಂತಪ್ಪ, ಬಿ.ಕೆ. ಸೈಯದ್ ರೆಹಮಾನ್, ಏಜಾಜ್ ಅಹ್ಮದ್,  ನಸ್ರೂಲ್, ವಿಜಯಕುಮಾರ್, ಹನುಮಂತಪ್ಪ ಕೊತ್ವಾಲ್, ಎಂ.ಎಸ್.ಆನಂದ್ ಕುಮಾರ್, ಸನಾವುಲ್ಲಾ ಸಾಬ್, ಬಿ.ಕೆ.ಬಾಷಾ, ಕಿರಣ್ ಭೂತೆ, ರಘುಪತಿ, ಸಂತೋಷ ನೋಟದರ್, ಸಚಿನ್ ಕೊಂಡಜ್ಜಿ, ರಾಘವೇಂದ್ರ ಕೊಂಡಜ್ಜಿ, ಅರುಣ್ ಬೊಂಗಾಳೆ, ಹಾಜಿಹಾಲಿ, ಹೆಚ್.ಶಿವಪ್ಪ, ನಾಗಮ್ಮ, ಭಾಗ್ಯಮ್ಮ, ವಿದ್ಯಾ ಸವಿತಾ, ಮಾಲಾ, ನೇತ್ರಾವತಿ ಇತರರು ಹಾಜರಿದ್ದರು.

error: Content is protected !!