ಹರಪನಹಳ್ಳಿ, ಏ. 30 – ಹಮಾಲರು ತಮ್ಮ ಬೆವರು ಹಾಗೂ ಶಕ್ತಿಯನ್ನು ವಿನಿಯೋ ಗಿಸಿ ಶ್ರಮವಹಿಸಿ ದುಡಿಯುವ ಜನ ಆಗಿದ್ದು, ದುಡಿಯುವ ಜನತೆ ಪರವಾಗಿ ಶ್ರಮಿಸುವವರಿಗೆ ಮತ ಹಾಕಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಹೇಳಿದರು.
ಪಟ್ಟಣದ ಕೋಟೆ ಕಾಳಮ್ಮ ದೇವಸ್ಥಾನದ ಆವರಣದಲ್ಲಿ ಭಾನುವಾರ ಹರಪನಹಳ್ಳಿ ತಾಲ್ಲೂಕು ಲಾರಿ ಹಮಾಲರ ಸಂಘ (ಸಿಐಟಿಯು)ದ ಸದಸ್ಯರಿಗೆ ಸದಸ್ಯತ್ವ ಕಾರ್ಡ್ ವಿತರಣೆ ಹಾಗೂ ರಾಜಕೀಯ ಜಾಗೃತಿ ಕಾರ್ಯಕ್ರಮವನ್ನು ಅಕ್ಕಿ ಮೂಟೆ ಹೊರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದುಡಿಯುವ ವರ್ಗಕ್ಕೆ ಸರ್ಕಾರಗಳು, ಅನುದಾನವನ್ನು ಮೀಸಲಿಡಬೇಕು ಹಾಗೂ ದುಡಿಯುವ ಜನರಿಗೆ ಆರೋಗ್ಯ ವಿಮೆ ಅಗತ್ಯವಾಗಿದೆ ಎಂದ ಅವರು ಹಮಾಲರು ಕೂಡ ಆರ್ಥಿಕವಾಗಿ ಸಬಲರಾಗಲು ಮುಂದೆ ಬರಬೇಕು. ತಮ್ಮ ಮಕ್ಕಳಿಗೆ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣವನ್ನು ಕೊಡಿಸುವ ಮುಖಾಂತರ ಉತ್ತಮ ಭವಿಷ್ಯ ರೂಪಿಸಬೇಕು ಎಂದರು.
ರಾಜ್ಯ ಸಿಐಟಿಯು ಕಾರ್ಯದರ್ಶಿ ಮಹೇಶ್ ಪತ್ತಾರ ಮಾತನಾಡಿ, ಮಾರುಕಟ್ಟೆ ಚಕ್ರದಲ್ಲಿ ಹಮಾಲರು ಬೆನ್ನು ಕೊಡದೆ ಹೋದರೆ, ಜೀವನ ನಡೆಸುವುದು ಕಷ್ಟ. ಪ್ರತಿಯೊಂದು ಕೆಲಸವನ್ನು ಮಾಡುವವರು ದೇಶದ, ರಾಜ್ಯದ ಜನರ ಬದುಕಿನ ಭಾಗವಾ ಗಿದ್ದಾರೆ ಹಮಾಲರು. ತಂತ್ರಜ್ಞಾನ ಮುಂದುವರೆ ದಿದ್ದು ಹಮಾಲರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಬೇಕು, ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ರಂಗ ಕರ್ಮಿ ಪರಶುರಾಮಪ್ಪ ಮಾತನಾಡಿ, ಇಂದಿನ ಬೆಲೆ ಏರಿಕೆಗೆ ಅನುಗುಣವಾಗಿ ಶ್ರಮಕ್ಕೆ ತಕ್ಕ ಬೆಲೆ ನೀಡಬೇಕು. ಇದಕ್ಕೆ ಚುನಾವಣೆ ನಂತರ ದರಪಟ್ಟಿಯನ್ನು ನಿಗದಿಪಡಿಸಲಾಗುವುದು ಎಂದರು.
ಗೊಬ್ಬರ, ಬೀಜ ಹಾಗೂ ಕೃಷಿ ಪರಿಕರಗಳ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಪಿ.ಕೆ.ಎಂ.ನಾಗಲಿಂಗಯ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ದೇವದಾಸಿ ಮಹಿಳಾ ವಿಮೋಚನಾ ಸಂಘದ ಅಧ್ಯಕ್ಷರಾದ ಟಿ.ವಿ.ರೇಣುಕಮ್ಮ, ರಹಮತ್‌ವುಲ್ಲಾ, ಹಮಾಲರ ಸಂಘದ ಅಧ್ಯಕ್ಷ ವೆಂಕಟೇಶ, ಉಪಾಧ್ಯಕ್ಷ ಬಿ.ಚಾಂದ್‌ಭಾಷ, ಕಾರ್ಯದರ್ಶಿ ಗೌಸ್ ಮೊಹಿದ್ದೀನ್, ಕಸಾಪ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಬುಡೇನ್‌ಸಾಬ್, ಹೆಚ್. ಫಕ್ಕೀರಪ್ಪ, ಊರಪ್ಪ, ಅಕ್ಬರ್ ಸಾಬ್, ಸಾಲಿಯಾ, ರಹಮತ್ತಿ ಸೇರಿದಂತೆ ಇತರರು ಇದ್ದರು.