ದಾವಣಗೆರೆ, ಏ.29- ಪುಸ್ತಕದಲ್ಲಿ ಇಲ್ಲದ್ದನ್ನು ಮಕ್ಕಳಿಗೆ ಮನ ಮುಟ್ಟುವ ಹಾಗೆ ಅರ್ಥೈಸಲು, ಶಿಕ್ಷಣದಲ್ಲಿ ರಂಗಕಲೆ ಸಹಾಯಕವಾಗಿದೆ ಎಂದು ಬಿಇಎ ಶಿಕ್ಷಣ ಮಹಾವಿದ್ಯಾಲಯದ ಆಡಳಿತಾಧಿಕಾರಿ ಪ್ರೊ. ವೈ. ವೃಷಭೇಂದ್ರಪ್ಪ ತಿಳಿಸಿದರು.
ನಗರದ ಬಿ.ಇ.ಎ ಶಿಕ್ಷಣ ಮಹಾವಿದ್ಯಾಲಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ಶಿಕ್ಷಣದಲ್ಲಿ ರಂಗಕಲೆ ಕಾರ್ಯಾಗಾರ’ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಗಾರವು ಶಿಕ್ಷಣ ವೃತ್ತಿಯಲ್ಲಿ ತೊಡಗುವ ಭಾವೀ ಶಿಕ್ಷಕರಿಗೆ ಮಹತ್ವದ್ದು. ಸುಲಭವಾಗಿ ಮಕ್ಕಳಿಗೆ ಪಾಠ ಅರ್ಥೈಸಲು ರಂಗಕಲೆ ಶಿಕ್ಷಣ ಅನುಕೂಲ ಎಂದರು.
ಸೋಮಿನಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಣ್ಣಪ್ಪ ಒಂಟಮಾಳಗಿ ಮಾತನಾಡಿ, ಕೇವಲ ಒಂದೇ ಮಾದರಿ ಅನುಸರಿಸಿ ಪಾಠ ಮಾಡಿದರೆ ಮಕ್ಕಳಿಗೆ ಅರ್ಥೈಸಿಕೊಳ್ಳಲು ಕಷ್ಟವಾಗಲಿದೆ. ಈ ನಿಟ್ಟಿನಲ್ಲಿ ಹಾಡು, ಅಭಿನಯ, ಡಾನ್ಸ್ ಮತ್ತು ಇತರೆ ಚಟುವಟಿಕೆಗಳ ಮೂಲಕ ಪಾಠ ಮಾಡಿದಾಗ ವಿದ್ಯಾರ್ಥಿಗಳ ಕಲಿಕೆ ಸುಲಭವಾಗಲಿದೆ ಎಂದರು.
ಉಪನ್ಯಾಸಕ ಡಾ. ಸಾಸ್ವೆಹಳ್ಳಿ ಸತೀಶ್, ಕಾಲೇಜಿನ ಪ್ರಾಚಾರ್ಯ ಡಾ.ಎ.ಜೆ ನೀತಾ, ಸಹಾಯಕ ಪ್ರಾಧ್ಯಾಪಕ ಕೆ. ಮುರುಗೇಶಿ ಮತ್ತಿತರರು ಉಪಸ್ಥಿತರಿದ್ದರು.