ಗ್ಯಾರಂಟಿಗಾಗಿ ಖಾಲಿ ಆದ ಖಜಾನೆ ತುಂಬಿಸಲು ತೆರಿಗೆ ಹೆಚ್ಚಳ ಪಾಲಿಕೆ ವಿಪಕ್ಷ ನಾಯಕ ಪ್ರಸನ್ನ ಕುಮಾರ್ ಆರೋಪ
ದಾವಣಗೆರೆ, ಏ. 26 – ಗ್ಯಾರಂಟಿ ಯೋಜನೆಗಳಿಂದ ಖಾಲಿ ಆಗಿರುವ ಖಜಾನೆ ತುಂಬಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಆಸ್ತಿ ತೆರಿಗೆಯಲ್ಲಿ ಹೆಚ್ಚಳ ಮಾಡಿದೆ ಎಂದು ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಆಸ್ತಿ ಮೇಲಿನ ಮಾರ್ಗಸೂಚಿ ಮೌಲ್ಯ ಹೆಚ್ಚಿಸುವ ಮೂಲಕ ಜನರಿಗೆ ತೆರಿಗೆ ಶಾಕ್ ನೀಡಿದೆ ಎಂದು ಹೇಳಿದರು.
ಸ್ಥಿರಾಸ್ತಿಯ ಮಾರ್ಗಸೂಚಿ ಬೆಲೆಯನ್ನು ಶೇ.50ರಿಂದ ಶೇ.100ರಷ್ಟು ಹೆಚ್ಚಿಸಲಾಗಿದೆ. ಇದರ ಮಾನದಂಡದಡಿ ಆಸ್ತಿ ತೆರಿಗೆ ದುಪ್ಪಟ್ಟು ಹೆಚ್ಚಿಸಲಾಗಿದೆ ಎಂದು ಹೇಳಿದರು.
ಖಾಲಿ ನಿವೇಶನ, ಕಟ್ಟಡ ಹಾಗೂ ಜಮೀನುಗಳ ಮೇಲೆಯೂ ತೆರಿಗೆ ಹೆಚ್ಚಿಸ ಲಾಗಿದೆ. ಇದರ ಮೂಲಕ ಸಾರ್ವಜನಿಕರ ಹಣ ಲೂಟಿ ಮಾಡಲು ಹೊರಟಿದೆ. ಗ್ಯಾರಂಟಿ ಹೆಸರಲ್ಲಿ ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಿಂದ ಕಿತ್ತುಕೊಳ್ಳಲು ಹೊರಟಿದೆ ಎಂದು ಟೀಕಿಸಿದರು.
ವಿದ್ಯಾನಗರ ಆಂಜನೇಯ ದೇವಸ್ಥಾನದ ಸಮೀಪ ಇದುವರೆಗೆ ಆಸ್ತಿ ತೆರಿಗೆ 10 ಸಾವಿರ ರೂ. ಇತ್ತು. ಈಗದು 20 ಸಾವಿರ ರೂ. ಆಗಿದೆ. ಪಿ.ಜೆ. ಬಡಾವಣೆಯಲ್ಲಿ ಕಳೆದ ಬಾರಿ 17 ಸಾವಿರ ರೂ. ಕಟ್ಟಿದವರು 30 ಸಾವಿರ ರೂ. ಭರಿಸಬೇಕಿದೆ. ಎವಿಕೆ ಕಾಲೇಜು ರಸ್ತೆಯ ಮನೆಯೊಂದಕ್ಕೆ 35 ಸಾವಿರ ರೂ. ತೆರಿಗೆ ಇತ್ತು. ಈಗ ಅದು 65 ಸಾವಿರ ರೂ.ಗೆ ಹೆಚ್ಚಳವಾಗಿದೆ. ಶ್ರಮಿಕರೇ ವಾಸಿಸುವ ಯಲ್ಲಮ್ಮನಗರದ 600 ಚದರಡಿ ಮನೆಯ ತೆರಿಗೆ ಈ ಹಿಂದೆ 3592 ರೂ. ಇತ್ತು. ಈಗ 8372 ರೂ.ಗೆ ಹೆಚ್ಚಿಸಲಾಗಿದೆ. ಎಂದರು.
ಹಿಂದಿನ ಮಾರ್ಗಸೂಚಿ ಬೆಲೆಯನ್ವಯ ಆಸ್ತಿ ತೆರಿಗೆ ಸಂಗ್ರಹಿಸಬೇಕು. ಈ ಮಾಸಾಂತ್ಯದವರೆಗೆ ಆಸ್ತಿ ತೆರಿಗೆ ಕಟ್ಟಿದ್ದಲ್ಲಿ ಶೇ.5ರಷ್ಟು ರಿಯಾಯಿತಿ ಕಲ್ಪಿಸಿರುವ ಕ್ರಮವನ್ನು 60 ದಿನಗಳ ಕಾಲ ವಿಸ್ತರಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ನಗರಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಎಸ್.ಟಿ.ವೀರೇಶ್ ಮಾತನಾಡಿ ಆಸ್ತಿ ನೋಂದಣಿ, ಸ್ಟಾಂಪ್ ಡ್ಯೂಟಿ, ಮದ್ಯದ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರ ದುಪ್ಪಟ್ಟು ಮಾಡಿದೆ ಎಂದು ಹೇಳಿದರು.
ಪಾಲಿಕೆ ಸದಸ್ಯ ಆರ್. ಶಿವಾನಂದ್ ಮಾತನಾಡಿ ಸಾರ್ವಜನಿಕ ನಳದಲ್ಲಿ ಪೂರೈಸಲಾಗುವ ನೀರಿಗೆ ಈ ಹಿಂದೆ 2345 ರೂ. ಕಟ್ಟುವ ಜಾಗದಲ್ಲಿ ಈ ಬಾರಿ 4900 ರೂ. ಕಟ್ಟಬೇಕಿದೆ. ಜಿಲ್ಲಾ ಸಚಿವರು ತೆರಿಗೆ ನೀತಿ ಬಗ್ಗೆ ತಮ್ಮ ನಿಲುವು ಪ್ರಕಟಿಸಬೇಕು. ಇಲ್ಲವಾದಲ್ಲಿ ಸಚಿವರ ಮನೆ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಎಂ. ವೀರೇಶ್ ಉಪಸ್ಥಿತರಿದ್ದರು.