ದಾವಣಗೆರೆ, ಏ.17 – ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ನಾಳೆ ದಿನಾಂಕ 18ರ ಗುರುವಾರ ಬೃಹತ್ ರೋಡ್ ಷೋ ಹೊರಡುವ ಮೂಲಕ ನಾಮಪತ್ರ ಸಲ್ಲಿಸುತ್ತಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಎರಡು ಭಾಗಗಳಿಂದ ಬೆಳಗ್ಗೆ 10ಕ್ಕೆ ರೋಡ್ ಷೋ ಆರಂಭಗೊಂಡು, ಎರಡೂ ತಂಡಗಳು ಪಿ.ಬಿ. ರಸ್ತೆಯ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ತಲುಪುತ್ತವೆ ಎಂದು ಹೇಳಿದರು.
ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಿಂದ ಹಗೇದಿಬ್ಬ ವೃತ್ತ, ಕಾಳಿಕಾದೇವಿ ರಸ್ತೆ, ಚೌಕಿಪೇಟೆ, ಬಕ್ಕೇಶ್ವರ ದೇವಸ್ಥಾನ, ಮಂಡಿಪೇಟೆ ಮತ್ತು ಲಕ್ಷ್ಮೀ ವೃತ್ತದ ಮೂಲಕ ಪಿ.ಬಿ. ರಸ್ತೆಗೆ ತಲುಪುವ ರೋಡ್ ಷೋಗೆ ಶಾಸಕ ಶಾಮನೂರು ಶಿವಶಂಕರಪ್ಪ ಚಾಲನೆ ನೀಡುವರು.
ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದಿಂದ ಎಚ್.ಕೆ.ಆರ್ ವೃತ್ತ, ಡಾಂಗೆ ಪಾರ್ಕ್, ಶಿವಪ್ಪಯ್ಯ ವೃತ್ತ, ತ್ರಿಶೂಲ್ ಟಾಕೀಸ್ ಮೂಲಕ ಪಿ.ಬಿ. ರಸ್ತೆಗೆ ಹೋಗುವ ರೋಡ್-ಷೋಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಚಾಲನೆ ನೀಡಲಿದ್ದಾರೆ.
ಈ ವೇಳೆ ರೋಡ್ ಷೋನಲ್ಲಿ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್. ಬಸವಂತಪ್ಪ, ಡಿ.ಜಿ. ಶಾಂತನಗೌಡ, ಶಿವಗಂಗಾ ಬಸವರಾಜ್, ಬಿ. ದೇವೇಂದ್ರಪ್ಪ, ಶ್ರೀಮತಿ ಲತಾ ಮಲ್ಲಿಕಾರ್ಜುನ್, ಮುಖಂಡರುಗಳಾದ ವಾಗೀಶ್ ಸ್ವಾಮಿ, ಎಸ್. ರಾಮಪ್ಪ, ನಂದಿಗಾವಿ ಶ್ರೀನಿವಾಸ್, ವಡ್ನಾಳ್ ರಾಜಣ್ಣ ಸೇರಿದಂತೆ ಅನೇಕರು ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ ಎಂದು ಮಂಜಪ್ಪ ಹೇಳಿದರು.
ವಿನಯ್ ಅವರು ಅಹಿಂದ ಮತಗಳಿಂದ ಗೆಲ್ಲುತ್ತೇನೆ ಎಂಬುದು ಅಸಾಧ್ಯ, ಆದ್ದರಿಂದ ಈಗಲೂ ಕಾಲ ಮಿಂಚಿಲ್ಲ, ತಮ್ಮ ನಿಲುವು ಬದಲಿಸಿ ಕಾಂಗ್ರೆಸ್ಗೆ ಬೆಂಬಲಿಸುವಂತೆ ಕೇಳಿಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿರಿಯರಾದ ಹೆಚ್.ಎಂ. ರೇವಣ್ಣ ಸೇರಿದಂತೆ ಪಕ್ಷದ ಹಲವರು ವಿನಯ್ ಅವರಿಗೆ ಮನವರಿಕೆ ಮಾಡಿದರೂ ಸಹ ಹಠ ಸಾಧಿಸುತ್ತಿದ್ದಾರೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ದಕ್ಷಿಣ ವಲಯದ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್, ಸುರೇಶ್ ಉತ್ತಂಗಿ, ಎಸ್. ಮಲ್ಲಿಕಾರ್ಜುನ್, ಎ. ನಾಗರಾಜ್ ಇದ್ದರು.