ಇಂದಿನ ನಮ್ಮ ಒತ್ತಡದ ಬದುಕಿನಲ್ಲಿ ನಮ್ಮ ಬದುಕು ಸುಮಧುರವಾಗಿರ ಬೇಕಾದರೆ, ಸಂಬಂಧವನ್ನು ಗಟ್ಟಿಯಾಗಿ ಇಟ್ಟುಕೊಳ್ಳಬೇಕೆಂದರೆ ನಾವು ಕೆಲವೊಮ್ಮೆ ಕುರುಡು, ಕೆಲವೊಮ್ಮೆ ಕಿವುಡು, ಇನ್ನೂ ಕೆಲವೊಮ್ಮೆ ಮೂಗರಾಗಿ ಇರುವುದನ್ನು ಕಲಿಯಬೇಕಾಗುತ್ತದೆ.
ಉದ್ಯೋಗಂ ಪುರುಷ ಲಕ್ಷಣಂ ಹಳೆಯ ಮಾತು, ಇಂದು ಉದ್ಯೋಗಂ ಸ್ತ್ರೀ ಲಕ್ಷಣಂ. ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆ ಪುರುಷರಿಗೆ ಸರಿಸಮನಾಗಿ ದುಡಿ ಯುತ್ತಿದ್ದಾಳೆ. ಜೊತೆಗೆ ಸಂಸಾರವನ್ನು ನಿಭಾಯಿಸುತ್ತಾಳೆ. ಹೀಗಾಗಿ ಪುರುಷರು ಹಾಗೂ ಮಹಿಳೆಯರು ಒಂದಾಗಿ ತಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕಾಗುತ್ತದೆ. ಜೊತೆ ಗೂಡಿ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಇಬ್ಬರಲ್ಲೂ ಸುಮಧುರ ಬಾಂಧವ್ಯ ಮೂಡಲು ಇಬ್ಬರು ಉತ್ಸಾಹ, ಲವಲವಿಕೆಯನ್ನು ಹೊಂದಿ ಅನ್ಯೋನ್ಯತೆ ಯಿಂದ ಕೂಡಿ ಬಾಳಬೇಕು. ಪ್ರೀತಿ-ವಿಶ್ವಾಸ ನಂಬಿಕೆ ಯಿಂದ ಕರ್ತವ್ಯ ನಿರ್ವಹಿಸಬೇಕು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ರಥದ ಎರಡು ಚಕ್ರಗಳಾಗಿ ಬಾಳು ಬೆಳಕಾಗುವಂತೆ ಸಾಗಬೇಕಾದದ್ದು ಅತ್ಯವಶ್ಯಕ.
ಪೂರ್ಣ ಜೀವನದ ಕುರಿತು ಜಗತ್ತಿನ ಶ್ರೇಷ್ಠ ಅನು ಭಾವಿಗಳು, ತತ್ವಜ್ಞಾನಿಗಳು, ಸಾಕಷ್ಟು ಆಲೋಚಿಸಿದ್ದಾರೆ, ಚಿಂತಿಸಿದ್ದಾರೆ. ಬದುಕನ್ನು ಸಮಗ್ರವಾಗಿ ಅರಿತುಕೊಳ್ಳುವುದಾಗಲೀ ಅನುಭವಿಸುವುದಾಗಲೀ ಅಷ್ಟು ಸುಲಭವಾದದ್ದಲ್ಲ. ಸಾವಿರಾರು ವರ್ಷಗಳಿಂದಲೂ ಜೀವನ ಎಂದರೆ ಏನು? ಎಂಬ ಚಿಂತನ-ಮಂಥನ ಸಾಗಿ ಬರುತ್ತಿರುವುದೇ ಅದಕ್ಕೆ ಸಾಕ್ಷಿ! ಬದುಕು ಅಷ್ಟು ರಹಸ್ಯ, ಗಹನ, ಗಂಭೀರ! ಆಳವಾದ ಆಲೋಚನೆಗೆ ತೊಡಗಿದಾಗ ಮಾತ್ರ ಅದು ತನ್ನ ರಹಸ್ಯವನ್ನು ಒಂದಿಷ್ಟು ಬಿಟ್ಟುಕೊಡುತ್ತದೆ. ಜೀವನವೆಂದರೆ ನಿರಂತರ ಸತ್ಕಾರ್ಯದಲ್ಲಿ, ಸವಿ ಕಾರ್ಯದಲ್ಲಿ ತೊಡಗಿರುವುದು. ಸವಿಯನ್ನೇ ಸಂಗ್ರಹಿಸಿ, ಸವಿಯನ್ನೇ ಹಂಚಿಕೊಂಡು ಸದಾ ಸರ್ವರಿಗೂ ಸವಿಯಾಗಿರುವುದೇ ನಮ್ಮ ಬದುಕಿನ ಸುಮಧುರ ಬಾಂಧವ್ಯದ ಲಕ್ಷಣ.
ಬಹಿರಂಗದ ಸಮೃದ್ಧಿಯನ್ನು ಬಯಸುವುದು ಆಧುನಿಕತೆ. ಅಂತರಂಗದ ಸಮೃದ್ಧಿಯನ್ನು ಬಯಸುವುದು ಆಧ್ಯಾತ್ಮಿಕತೆ. ನಾವು ಈ ಎರಡರಲ್ಲಿಯೂ ಪರಿಪೂರ್ಣರಾಗಬೇಕು. ಜೀವನಾನುಭವ, ಜೀವನ ದರ್ಶನ ಕಲಿತವರಿರಲಿ, ಕಲಿಯದವರಿರಲಿ ತೆರೆದ ಕಣ್ಣು, ಅರಳಿದ ಮನಸ್ಸು ಹೊಂದಿದವರಿಗೆ ತನಗೆ ತಾನೇ ಜೀವನ ದರ್ಶನ ಆಗಿಬಿಡುತ್ತದೆ. ನಾವು ಬದುಕಿನಲ್ಲಿ ಸುಮಧುರ ಬಾಂಧವ್ಯ ಹೊಂದಿದಾಗ ನೆಮ್ಮದಿ ನಮ್ಮನ್ನು ಹರಸಿ ಬರುತ್ತದೆ, ಬಾಳು ಬಂಗಾರವಾಗುತ್ತದೆ. ಆಸೆ ಆಮಿಷ ರಹಿತವಾದ ಪರಿಶುದ್ಧ ಪ್ರೇಮವೇ ಮಧುರ ಭಾವ, ಅದಕ್ಕೆ ಭಕ್ತಿ ಎಂಬ ನಾಮ, ಅದರ ಶಕ್ತಿ ನಿಸ್ಸೀಮ.
ಜೀವನವೆಂದರೆ ಬರೀ ಗಳಿಸುವುದಲ್ಲ. ಅನುಭವಿಸು ವುದು, ದುಡಿಯುವುದು, ದುಡಿತದಿಂದ ದೊರೆತಿದ್ದರಲ್ಲಿ ಸಂತೃಪ್ತಿ ಪಡುವುದು. ಒಂದು ಸುಂದರ ಮನೆಯನ್ನು ಕಟ್ಟಿ ಅದರಲ್ಲಿ ಸಂತಸದಿಂದ ಇರಬೇಕು. ಆದರೆ ನೆರೆಮನೆಯವರ ಅರಮನೆ ಕಂಡು ಮರುಗಬಾರದು.
ಮನುಷ್ಯನಿಗೆ ಆಸೆ-ಆಕಾಂಕ್ಷೆ ಇರಬೇಕು, ಇರಬಾರದೆಂದಲ್ಲ ತೃಪ್ತಿ ಕೊಡಬಹುದಾದ ಸಹಜ ಆಸೆ ಇರಬೇಕು. ಈ ದೇಶದಲ್ಲಿ ಇರುವವರೆಲ್ಲರೂ ಪ್ರಧಾನಮಂತ್ರಿಗಳು ಆಗಬೇಕೆಂದು ಆಸೆ ಪಟ್ಟರೆ ಅದನ್ನು ಹೇಗೆ ಈಡೇರಿಸಲಾದೀತು? ಅವರು ತೃಪ್ತರಾಗುವುದು ಎಂದು? ಅನ್ಯರ ಆದರ್ಶ ನಮ್ಮ ಆದರ್ಶವಾಗಬೇಕಿಲ್ಲ, ಅನ್ಯರ ದೃಷ್ಟಿಯಿಂದ ಬದುಕನ್ನು ನೋಡುವುದಲ್ಲ, ನಮ್ಮ ದೃಷ್ಟಿಯಿಂದ ನಾವು ನೋಡಬೇಕು, ಆಗ ಜೀವನ ದರ್ಶನ! “ನಾವು ಅವರಿವರು ಆಗುವುದಕ್ಕಿಂತ ನಾವು ನಾವಾಗಬೇಕು! ಅದರಿಂದ ಸದಾ ಸಂತೃಪ್ತಿ.
ನಾವು ಸುಮ್ಮನೆ ಈ ದೇಶ, ಕಾಲ, ಎಲ್ಲಾ ಕೆಟ್ಟು ಹೋಗಿದೆ’ ಎಂದು ಗೋಳಾಡುತ್ತೇವೆ. ಈ ಭೂಮಿ, ಈ ಬೆಟ್ಟ, ಸೂರ್ಯ-ಚಂದ್ರ, ಹೂ ಬಳ್ಳಿ ಯಾವುದು ಕೆಟ್ಟಿಲ್ಲ, ಎಲ್ಲೋ ಒಬ್ಬರು,ಇಬ್ಬರು ಮನುಷ್ಯರು ಕೆಟ್ಟರೆ ಎಲ್ಲವೂ ಕೆಟ್ಟಂತಾಯಿತೇ? ನಮ್ಮ ನೋಡುವ ದೃಷ್ಟಿ ಸರಿ ಇರಬೇಕು ಅಲ್ಲವೇ?
– ಜೆಂಬಿಗಿ ಮೃತ್ಯುಂಜಯ,
ಕನ್ನಡ ಉಪನ್ಯಾಸಕರು, ದಾವಣಗೆರೆ.