ದಾವಣಗೆರೆ, ಏ.1- ಹರಿಹರ ತಾಲ್ಲೂಕಿನ ಹಿರೇ ಹಾಲಿವಾಣ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಏಳೂರು ಕರಿಯಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಕಾರಣಕ್ಕೂ ಪ್ರಾಣಿ ಬಲಿಗೆ ಜಿಲ್ಲಾಡಳಿತ ಅವಕಾಶ ನೀಡಬಾರದು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷರಾದ ಶ್ರೀ ದಯಾನಂದ ಸ್ವಾಮೀಜಿ ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದರು.
ಏಳೂರು ಕರಿಯಮ್ಮ ದೇವಿ ಜಾತ್ರೆ ಇದೇ ದಿನಾಂಕ 5 ರವರೆಗೆ ನಡೆಯಲಿದ್ದು, ನಮಗೆ ದೊರೆತ ಮಾಹಿತಿ ಪ್ರಕಾರ ಮೂರನೇ ದಿನ ಕೋಣ ಸೇರಿದಂತೆ ವಿವಿಧ ಪ್ರಾಣಿಗಳ ಬಲಿ ಕೊಡಲು ಸಿದ್ಧತೆ ಮಾಡಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಯಾವುದೇ ಪ್ರಾಣಿ ಬಲಿ ಆಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಬೇಕೆಂದು ಮನವಿ ಮಾಡಿದರು.
ಕೋಣ, ಕುರಿ, ಮತ್ತಿತರೆ ಪ್ರಾಣಿಗಳನ್ನು ಬಲಿ ಕೊಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಹದಿಮೂರು ವರ್ಷದೊಳಗಿನ ಕೋಣನ ಬಲಿ ಕೊಡುವಂತಿಲ್ಲ. ದೇವಸ್ಥಾನದ ಸುತ್ತ ಮುತ್ತಲಿನಲ್ಲಿ ಪ್ರಾಣಿ ಬಲಿ ನಿಷಿದ್ಧವಾಗಿದೆ. ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಅಧಿನಿಯಮ, ತಿದ್ದುಪಡಿ ಪ್ರಕಾರ ಯಾವುದೇ ಮನೆಗಳ ಮುಂದೆಯೂ ಕೋಣ ಬಲಿ ನಡೆಯುವಂತಿಲ್ಲ. ಯಾವುದೇ ಪ್ರಾಣಿ ಬಲಿಗೆ ಅವಕಾಶ ನೀಡದಿರುವಂತೆ ಕೋರಿದರು.
ದೇವಾಲಯಗಳು ವಧಾಲಯಗಳಾಗಬಾರದು. ಸಾತ್ವಿಕ ಪೂಜೆ ಮಾಡುವಂತೆ ಹಾಲಿವಾಣ ಜನತೆಗೆ ಮನವಿ ಮಾಡಿದ ಸ್ವಾಮೀಜಿ ಅವರು, ಭಕ್ತ ಸಮೂಹದಲ್ಲಿ ಜಾಗೃತಿ ಮೂಡಿಸುವ ಸದುದ್ಧೇಶದಿಂದ ಅಹಿಂಸಾ ಪ್ರಾಣಿ ದಯಾ ಅಧ್ಯಾತ್ಮಿಕ ಯಾತ್ರೆ ನಡೆಸಲಾಗುವುದು ಎಂದು ಹೇಳಿದರು.