ಸಿದ್ಧಗಂಗಾ ವಿದ್ಯಾಸಂಸ್ಥೆಯಿಂದ ಏ.7ರಂದು ಕ್ವಿಜ್

ದಾವಣಗೆರೆ, ಮಾ. 28- ಸಿದ್ಧಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಎಂ.ಎಸ್. ಶಿವಣ್ಣನವರ ಗೌರವಾರ್ಥ ಏಪ್ರಿಲ್ 7ರಂದು ನಗರದ ಸಿದ್ಧಗಂಗಾ ಶಾಲೆಯಲ್ಲಿ ರಾಜ್ಯ ಮಟ್ಟದ `ಎಂಎಸ್‌ಎಸ್-2024 ಕ್ವಿಜ್’ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ತಿಳಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಈ ಬಾರಿ ಎಸ್ಸೆಸ್ಸೆಲ್ಸಿ ಮತ್ತು ಎಸ್‌ಎಸ್‌ಸಿ ಪರೀಕ್ಷೆ ಬರೆದಿರುವ ಮಕ್ಕಳು ಈ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಲಿಖಿತ ಕ್ವಿಜ್‌ನಲ್ಲಿ 10ನೇ ತರಗತಿ ವಿಜ್ಞಾನ ಮತ್ತು ಗಣಿತ ಎನ್‌ಸಿಇಆರ್‌ಟಿ ಪಠ್ಯ ಪುಸ್ತಕ ಆಧಾರಿತ ಬಹು ಆಯ್ಕೆಯ 60 ಪ್ರಶ್ನೆಗಳಿರಲಿವೆ  ಎಂದರು.

ಸಂಸ್ಥೆಯ ನಿರ್ದೇಶಕ ಡಾ.ಡಿ.ಎಸ್. ಜಯಂತ್ ಮಾತನಾಡಿ, ಈಗಾಗಲೇ ಮೂರು ಸಾವಿರ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. 80730-54295 ವಾಟ್ಸ್ ಆಪ್ ನಂಬರ್‌ಗೆ ಸಂಪರ್ಕಿಸಿ ನೋಂದಾಯಿಸಿಕೊಳ್ಳಬೇಕು.

ವಿಜೇತರಿಗೆ 25 ಸಾವಿರ ರೂ. ಪ್ರಥಮ, 15 ಸಾವಿರ ರೂ. ದ್ವಿತೀಯ, 10 ಸಾವಿರ ರೂ. ತೃತೀಯ ಬಹುಮಾನ ನೀಡಲಾಗುವುದು. 10 ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂ. ಸಮಾಧಾನಕರ ಬಹುಮಾನ ಹಾಗೂ 100 ಮಕ್ಕಳಿಗೆ ಎಂಎಸ್‌ಎಸ್ ಕ್ವಿಜ್ ಮೆಡಲ್ ನೀಡಲಾಗುವುದು. ನಗದು ಬಹುಮಾನ ಪಡೆಯುವ ಮಕ್ಕಳಿಗೆ ನಮ್ಮ ಕಾಲೇಜಿನಲ್ಲಿಯೇ ಎರಡು ವರ್ಷ ಪಿಯುಸಿ ಶಿಕ್ಷಣ ಉಚಿತವಾಗಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ಹೇಮಂತ್, ಪ್ರಾಚಾರ್ಯೆ ಗಾಯತ್ರಿ ಚಿಮ್ಮಡ್, ಹಿರಿಯ ವಿದ್ಯಾರ್ಥಿಗಳಾದ ಹರ್ಷ, ಮನೋಹರ್ ಉಪಸ್ಥಿತರಿದ್ದರು.

error: Content is protected !!