ಹರಿಹರ : ಮಾವನ ಕೊಂದ ಸೊಸೆಗೆ 4 ವರ್ಷ ಸಾಧಾರಣ ಕಾರಾಗೃಹ ಶಿಕ್ಷೆ

ದಾವಣಗೆರೆ, ಮಾ. 28- ಮಾವ (ಪತಿಯ ತಂದೆ)ನನ್ನು ಕೊಂದ ಆರೋಪದ ಹಿನ್ನೆಲೆಯಲ್ಲಿ ಜ್ಯೋತಿ (32) ಎಂಬಾಕೆಗೆ ಇಲ್ಲಿನ  ಘನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಸಾಧಾರಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಹರಿಹರ ಟೌನ್ ವಿದ್ಯಾನಗರ ವಾಸಿ ವೀರೇಶ್ ಅವರು ಜ್ಯೋತಿಯನ್ನು ವಿವಾಹ ವಾಗಿದ್ದು, ವೀರೇಶ್ ಅವರಿಗೆ 70 ವರ್ಷದ ವೃದ್ದ ತಂದೆ ಇದ್ದರು. ತಂದೆಯ ಚಾಕರಿ ಮಾಡುವ ಸಲುವಾಗಿ  ವೀರೇಶ್ ಹಾಗೂ ಜ್ಯೋತಿಗೆ ಪದೇ ಪದೇ ಜಗಳವಾಗುತ್ತಿತ್ತು. 

2022ರ ನವೆಂಬರ್ 4ರಂದು ನನ್ನ ತಂದೆ  ಶಿವಕುಮಾರ್ ಅವರು ಮಲಗಿದ್ದಾಗ ಜ್ಯೋತಿಯು ಬಿಸಿ ನೀರು ಹಾಗೂ ಕಾರದ ಪುಡಿ ಎರಚಿ, ವೇಲ್‌ನಿಂದ ಕುತ್ತಿಗೆಗೆ ಬಿಗಿದು ಒನಕೆಯಿಂದ ತಲೆಗೆ ಹೊಡೆದು ಸಾಯಿಸಿದ್ದಾಳೆ ಎಂದು ವೀರೇಶ್ ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ವಿಜಯಾನಂದ ಜೆ.ವಿ. ಅವರು ಜ್ಯೋತಿ ಅವರ ಮೇಲಿನ ಆರೋಪ ಸಾಬೀತಾಗಿದ್ದರಿಂದ ಮಾ.27ರಂದು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ವಕೀಲರಾದ ಸತೀಶ್‌ ಕುಮಾರ್ ಕೆ. ಎಸ್. ಪಿರ್ಯಾದಿ ಪರ ವಾದ ಮಂಡಿಸಿದ್ದರು.

error: Content is protected !!