ಅತ್ಯಾಧುನಿಕ ಬೌಲಿಂಗ್ ಮೆಷಿನ್ ಅಳವಡಿಕೆಗೆ ನಾಳೆ ಚಾಲನೆ

ದಾವಣಗೆರೆ, ಮಾ. 14- ದಾವಣಗೆರೆ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ಕಲಿಯುವ ಹಾಗೂ ಆಸಕ್ತಿ ಇರುವ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿ ಎಂದು ಲಿವರೇಜ್ ಯಂತ್ರ ಎನ್ನುವ ಕಂಪನಿಯ ಆಧುನಿಕ ಬೌಲಿಂಗ್ ಮೆಷಿನ್ ಅಳವಡಿಕೆಗೆ ನಾಡಿದ್ದು ದಿನಾಂಕ 16 ರಂದು ಮಧ್ಯಾಹ್ನ 2.30 ಕ್ಕೆ   ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಚಾಲನೆ ನೀಡಲಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.

ಮಧ್ಯ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇಂತಹ ಒಂದು ಬೌಲಿಂಗ್ ಮೆಷಿನ್ ಪರಿಚಯಿಸಿದ ಹಿರಿಮೆ ದಾವಣಗೆರೆ ಕ್ರಿಕೆಟ್ ಅಕಾಡೆಮಿಗೆ ಸಲ್ಲುತ್ತದೆ ಎಂದರು.

ದೇಶದ ಅನೇಕ ಕ್ರಿಕೆಟ್ ಸ್ಟಾರ್‌ಗಳು ಈ ಯಂತ್ರವನ್ನು ತಮ್ಮ ಸ್ವಂತ ಅಭ್ಯಾಸಕ್ಕಾಗಿ ಬಳಸುತ್ತಿದ್ದು, ದಾವಣಗೆರೆ ಕ್ರಿಕೆಟ್ ಅಕಾಡೆಮಿಯಿಂದ ಮಕ್ಕಳಿಗೆ ಈ ಯಂತ್ರ ಅಭ್ಯಾಸಕ್ಕೆ ಸಿಗುತ್ತಿರುವುದು ಅದೃಷ್ಟವೇ ಸರಿ ಎಂದರು. ಸುಮಾರು ಮೂರೂವರೆ ಲಕ್ಷ ರೂ. ವೆಚ್ಚದ ಈ ಬೌಲಿಂಗ್ ಮೆಷಿನ್ ವಿವಿಧ ವೇಗದಲ್ಲಿ ಹಾಗೂ ವಿವಿಧ ಸ್ಪಿನ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದು, ಕ್ರಿಕೆಟ್ ಪಟುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಕ್ರಿಕೆಟ್ ಕೋಚ್ ಆರ್. ತಿಮ್ಮೇಶ್ ಅವರ ಬಹುದಿನದ ಕನಸು ಇದೀಗ ನನಸಾದಂತಾಗಿದೆ ಎಂದು ಹೇಳಿದರು.

ಅಕಾಡೆಮಿಯ ಮಕ್ಕಳಿಗಾಗಿ ಈ ಯಂತ್ರವನ್ನು ತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇತರೆ ಆಟಗಾರರೂ ಬಳಸಲು ಶುಲ್ಕ ನಿಗದಿ ಮಾಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಕೋಚ್ ಆರ್. ತಿಮ್ಮೇಶ್, ಗೋಪಾಲಕೃಷ್ಣ, ಬಿ. ರಮೇಶ್‌ನಾಯ್ಕ, ಬಿ. ಬಸವರಾಜ್, ಉಮೇಶ್ ಸಿರಿಗೆರೆ, ಯುವರಾಜ್, ಪ್ರದೀಪ್ ಉಪಸ್ಥಿತರಿದ್ದರು. 

error: Content is protected !!