ಮೆಣಸಿನಕಾಯಿ ದರ ದಿಢೀರ್‌ ಕುಸಿತ : ರೈತರಿಂದ ವಾಹನಗಳಿಗೆ ಬೆಂಕಿ

ಹಾವೇರಿ, ಮಾ. 11 – ಹಾವೇರಿ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತವಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಪಟ್ಟಣದ ಎಪಿಎಂಸಿ ಕಚೇರಿಗೆ ನುಗ್ಗಿ ಪೀಠೋಪಕರಣ ಧ್ವಂಸಗೊಳಿಸಿ, ಕಲ್ಲು ತೂರಾಟ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಮೆಣಸಿನಕಾಯಿ ಬೆಲೆ ದಿಢೀರ್ ಇಳಿಕೆಯಾಗಿದ್ದರಿಂದ ರೊಚ್ಚಿಗೆದ್ದ ರೈತರು ಎಪಿಎಂಸಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ನಂತರ ಆವರಣದಲ್ಲಿ ನಿಂತಿದ್ದ ಎಪಿಎಂಸಿ ಅಧ್ಯಕ್ಷರ ಕಾರಿನ ಮೇಲೂ ಕಲ್ಲು ತೂರಿದ್ದಾರೆ. ಅಲ್ಲದೆ ಹಲವು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 12 ವಾಹನಗಳನ್ನು ರೈತರು ಸುಟ್ಟು ಹಾಕಿದ್ದಾರೆ. 1 ಅಗ್ನಿಶಾಮಕ ವಾಹನ ಸಹ ಬೆಂಕಿಗೆ ಆಹುತಿ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಮಾರುಕಟ್ಟೆಯನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ.

ಕಳೆದ ವಾರ ಪ್ರತಿ ಕ್ವಿಂಟಾಲ್‌ ಮೆಣಸಿನಕಾಯಿ ಬೆಲೆ 20 ಸಾವಿರ ರೂ. ಇತ್ತು. ಈಗ ಕ್ವಿಂಟಾಲ್‌ ಮೆಣಸಿನಕಾಯಿ ಬೆಲೆ 12 ಸಾವಿರ ರೂಪಾಯಿಗೆ ಕುಸಿದಿದೆ. ಇತ್ತೀಚಿನ ವಾರಗಳಲ್ಲಿ ಮೆಣಸಿನ ಕಾಯಿ ಬೆಲೆ ನಿರಂತರವಾಗಿ ಕುಸಿಯುತ್ತಿದೆ ಎಂದು ರೈತರು ಆಕ್ರೋಶಗೊಂಡಿದ್ದಾರೆ.

error: Content is protected !!