ಮಲೇಬೆನ್ನೂರು, ಮಾ.6- ಸುಕ್ಷೇತ್ರ ಉಕ್ಕಡಗಾತ್ರಿಯ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನಿಗೆ ಭಕ್ತರ ನೆರವಿನಿಂದ ಮಾಡಿಸಿರುವ 2.5 ಕೆ.ಜಿ. ತೂಕದ ಚಿನ್ನದ ಕಿರೀಟವನ್ನು ನಾಡಿದ್ದು ದಿನಾಂಕ 8 ರ ಶುಕ್ರವಾರ ಧಾರಣೆ ಮಾಡಲಾಗುವುದು ಎಂದು ಗದ್ದುಗೆ ಟ್ರಸ್ಟ್ ಕಾರ್ಯದರ್ಶಿ ಎಸ್.ಸುರೇಶ್ ತಿಳಿಸಿದ್ದಾರೆ.
ಸ್ವರ್ಣ ಕಿರೀಟವನ್ನು ಶಿವರಾತ್ರಿ ದಿನವಾದ ನಾಡಿದ್ದು ದಿನಾಂಕ 8 ರ ಶುಕ್ರವಾರ ಬೆಳಗ್ಗೆ ಕರ್ತೃ ಗದ್ದುಗೆಗೆ ಅಭಿಷೇಕ, ಮಹಾಮಂಗಳಾರತಿ ನೆರವೇರಿಸಿದ ನಂತರ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಭಕ್ತರ ಸಮ್ಮುಖದಲ್ಲಿ ತಮ್ಮ ಅಮೃತ ಹಸ್ತದಿಂದ ಅಜ್ಜಯ್ಯನಿಗೆ ಧಾರಣೆ ಮಾಡಲಿದ್ದಾರೆ.
ಅಜ್ಜಯ್ಯನಿಗೆ ಚಿನ್ನದ ಕಿರೀಟ ಮಾಡಿಸಬೇಕೆಂದು ಟ್ರಸ್ಟ್ ನಿರ್ದೇಶಕರ ಮತ್ತು ಭಕ್ತಾದಿಗಳ ಮಹದಾಸೆಯಾಗಿತ್ತು. ಅವರೆಲ್ಲರ ಸಂಕಲ್ಪದಂತೆ ಅಜ್ಜಯ್ಯನಿಗೆ ಭಕ್ತರ ದೇಣಿಗೆಯಿಂದ 1.65 ಕೋಟಿ ರೂ. ವೆಚ್ಚದಲ್ಲಿ ಏಳು ಹೆಡೆಯ ನಾಗರವನ್ನುಳ್ಳ 2.5 ಕೆ.ಜಿ. ತೂಕದ ಚಿನ್ನದ ಕಿರೀಟ ತಯಾರಿಸಲಾಗಿದೆ. ಅಜ್ಜಯ್ಯನಿಗೆ ಈಗಾಗಲೇ ಬೆಳ್ಳಿಯ ಕಿರೀಟ ಮತ್ತು ವಸ್ತ್ರದ ಕಿರೀಟಗಳಿವೆ. ಆದರೆ ಚಿನ್ನದ ಕಿರೀಟವೊಂದು ಇರಲಿ ಎಂದು ಕಳೆದ ವರ್ಷವೇ ಸಂಕಲ್ಪ ಮಾಡಿಕೊಂಡಿದ್ದೆವು. ಅದರಂತೆ ಬೆಂಗಳೂರಿನ ಗಂಗಾಧರ ಆಚಾರ್ ಸಿಲ್ವರ್ ವರ್ಕ್ಸ್ ನವರು ಕೇವಲ 2 ತಿಂಗಳಲ್ಲಿ ಈ ಚಿನ್ನದ ಕಿರೀಟವನ್ನು ತಯಾರಿಸಿ ಕೊಟ್ಟಿದ್ದಾರೆ ಎಂದು ಸುರೇಶ್ ತಿಳಿಸಿದರು.
ಎಸ್ಸೆಸ್ ಭಾಗಿ : ಅಜ್ಜಯ್ಯನಿಗೆ ಚಿನ್ನದ ಕಿರೀಟ ಧಾರಣೆ ಕಾರ್ಯಕ್ರಮದಲ್ಲಿ ಶಾಸಕರುಗಳಾದ ಶಾಮನೂರು ಶಿವಶಂಕರಪ್ಪ, ಬಿ.ಪಿ.ಹರೀಶ್, ಉದ್ಯಮಿ ಎಸ್.ಎಸ್.ಗಣೇಶ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಸೇರಿದಂತೆ ಇನ್ನೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆಂದು ಗದ್ದುಗೆ ಟ್ರಸ್ಟ್ ಕಮಿಟಿ ನಿರ್ದೇಶಕ ಜಿಗಳಿ ಇಂದೂಧರ್ ತಿಳಿಸಿದ್ದಾರೆ.
ಜಾತ್ರೆ : ಇದೇ ದಿನಾಂಕ 10 ರಿಂದ 17 ರವರೆಗೆ ಉಕ್ಕಡಗಾತ್ರಿಯಲ್ಲಿ ಅಜ್ಜಯ್ಯನ ಮಹಾ ಶಿವರಾತ್ರಿ ಜಾತ್ರೆ ಜರುಗಲಿದ್ದು, 11 ರಂದು ಅಜ್ಜಯ್ಯನ ಮಹಾರಥೋತ್ಸವ ನಡೆಯಲಿದೆ. ಅದಕ್ಕಾಗಿ ಎಲ್ಲಾ ಸಿದ್ದತೆಗಳು ಭರದಿಂದ ಸಾಗಿವೆ ಎಂದು ಸುರೇಶ್ ಮಾಹಿತಿ ನೀಡಿದರು.