ಪ್ರಜಾಪ್ರಭುತ್ವ ಹಾಳು ಮಾಡುವವರನ್ನು ಬೆಂಬಲಿಸದಿರಿ : ಎಸ್.ಆರ್. ಹಿರೇಮಠ

ದಾವಣಗೆರೆ, ಮಾ.5- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶದ ಸಂವಿಧಾನ, ಪ್ರಜಾಪ್ರಭುತ್ವ, ಬಹುತ್ವ ಸಂಸ್ಕೃತಿ ಹಾಳು ಮಾಡುವವರನ್ನು ಮತದಾರರು ಬೆಂಬಲಿಸಬಾರದು ಎಂದು ಸಿಟಿಜನ್ ಫಾರ್ ಡೆಮಾಕ್ರಸಿ ಸಂಘಟನೆಯ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಹೇಳಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ಪಕ್ಷೇತರ ರಾಜಕಾರಣ, ಸಂವಿಧಾನ ಪರ ರಾಜಕಾರಣ. ನಾವು ಇಂತವರಿಗೆ ಮತ ನೀಡಿ ಎಂದು ಹೇಳುವುದಿಲ್ಲ. ಯಾರೂ ಇಷ್ಟವಿಲ್ಲ ಎಂದಾದರೆ ನೋಟಾ ಆಯ್ಕೆಯೂ ಜನರ ಮುಂದಿದೆ. ಆದರೆ ಈ ಬಗ್ಗೆ ಜನರನ್ನು ಜಾಗೃತಗೊಳಿಸಬೇಕಿದೆ. ಜನ ಜಾಗೃತಿಗಾಗಿ 20ಲೋಕಸಭೆ ಕ್ಷೇತ್ರಗಳಲ್ಲಿ  ವ್ಯವಸ್ಥಿತವಾಗಿ ಜಾಥಾ ನಡೆಸಲಾಗುವುದು ಎಂದರು.

ಸಿಟಿಜನ್ ಫಾರ್ ಡೆಮಾಕ್ರಸಿ, ಜನಾಂದೋಲನಗಳ ಮಹಾಮೈತ್ರಿ ಮತ್ತು ಇತರೆ ಸಮಾನ ಮನಸ್ಕ ಸಂಘಟನೆಗಳು ಮಾ. 10ರಂದು ಕರೆ ನೀಡಿರುವ ದೆಹಲಿ ಚಲೋ, ರೈಲು ರೋಕೋ ಹೋರಾಟದ ತೀರ್ಮಾನ ಸ್ವಾಗತಾರ್ಹ. 

ಕೇಂದ್ರ ಸರ್ಕಾರ ರೈತರ ದಬ್ಬಾಳಿಕೆ ನಡೆ ಅನುಸರಿಸಿವೆ. ಇಂಥ ನಡೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಎಸ್.ಆರ್. ಹಿರೇಮಠ ಆಗ್ರಹಿಸಿದರು.

ಜನಾಂದೋಲನಗಳ ಮಹಾಮೈತ್ರಿಯ ಅನೀಷ್ ಪಾಷಾ ಮಾತನಾಡಿ, ರೈತರು, ಕಾರ್ಮಿಕರು, ದುಡಿ ಯುವ ವರ್ಗದವನ್ನು ಕಡೆಗಣಿಸುವ ಜತೆಗೆ ದೇಶದ ಸಂವಿಧಾನಕ್ಕೂ ಇಂದು ಅಪಾಯ ಎದುರಾಗಿದೆ. ಆದ್ದರಿಂದ ಸಂಘಟನೆ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ ಎಂದರು.

ಜನಾಂದೋಲನ ಮಹಾಮೈತ್ರಿಯ ಪ್ರಮುಖ ಶಿವನಕೆರೆ ಬಸವಲಿಂಗಪ್ಪ, ರೈತ ಸಂಘಟನೆಯ ಬಲ್ಲೂರು ರವಿಕುಮಾರ್, ದಲಿತ ಮುಖಂಡ ಎಚ್. ಮಲ್ಲೇಶ್ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!