ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರ

ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ಆರೋಪ

ದಾವಣಗೆರೆ, ಮಾ.1- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಹತ್ತು ತಿಂಗಳಾಗಿದ್ದು, ಎಲ್ಲಾ ರಂಗಗಳಲ್ಲೂ ವೈಫಲ್ಯ ಕಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್ ಆರೋಪಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಬರ ಪರಿಹಾರ ಕಾರ್ಯದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, 875ಕ್ಕೂ ಹೆಚ್ಚು ಜನರು ಸಿದ್ಧರಾಮಯ್ಯ ಅಧಿಕಾರವಧಿ ಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಾಗ್ಯೂ ಸರ್ಕಾರಕ್ಕೆ ರೈತರ ಪರ ಕಾಳಜಿ ಇಲ್ಲ ಎಂದರು.

ಎಸ್ಸಿ-ಎಸ್ಟಿಗೆ ಸೇರಿದ 11 ಕೋಟಿ ರೂ.ಗೂ ಹೆಚ್ಚು ಹಣವನ್ನು ಗ್ಯಾರಂಟಿ ಉದ್ದೇಶ ಗಳಿಗೆ ಬಳಸಿಕೊಂಡು ಶೋಷಿತ, ತಳ ಸಮು ದಾಯದ ಜನರಿಗೆ ಅನ್ಯಾಯ ಮಾಡಲಾಗಿದೆ. ಇದು ದಲಿತ ವಿರೋಧಿ ಸರ್ಕಾರ. ರಾಜ್ಯದ ಖಜಾನೆ ಖಾಲಿಯಾಗಿದ್ದು, ಇದೊಂದು ಶೂನ್ಯ ಅಭಿವೃದ್ಧಿ ಸರ್ಕಾರ ಎಂದರು.

ವಿಧಾನಸೌಧದ ಆವರಣದಲ್ಲಿಯೇ ಪಾಕಿಸ್ತಾನದ ಪರ ಘೋಷಣೆ ಕೂಗಿರುವ ಘಟನೆ ನಡೆದಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪೂರ್ಣ ಕುಸಿದಿದೆ. ಸರ್ಕಾರ ಅಲ್ಪ ಸಂಖ್ಯಾತರ ಓಲೈಕೆಗೆ ಮುಂದಾಗಿದೆ. 

ಬೆಲೆ ಏರಿಕೆಯೇ ಕಾಂಗ್ರೆಸ್ ಸರ್ಕಾರದ ದೊಡ್ಡ ಸಾಧನೆಯಾಗಿದ್ದು, ಬರದಲ್ಲಿ ಜನತೆಗೆ ಬೆಲೆ ಏರಿಕೆಯ ಬರೆ ಎಳೆಯಲಾಗುತ್ತಿದೆ ಎಂದು ರಾಜಶೇಖರ್ ಆರೋಪಿಸಿದರು.

ರೈತ ಮುಖಂಡ ಸತೀಶ್ ಬಿ.ಎಂ. ಕೊಳೇನಹಳ್ಳಿ ಮಾತನಾಡಿ, ಫೆ.29ರ ಮಧ್ಯ ರಾತ್ರಿಯಿಂದಲೇ ಭದ್ರಾ ನಾಲಾ ನೀರು ಸ್ಥಗಿತಗೊಳಿಸಲಾಗಿದೆ. ಕೊನೆ ಭಾಗಕ್ಕೆ ನೀರು ತಲುಪಲೇ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ರೈತರ ಸಂಕಷ್ಟಕ್ಕೆ ಧಾವಿಸಲಿಲ್ಲ ಎಂದು ಆರೋಪಿಸಿದರು.

ಕೊನೆ ಭಾಗಕ್ಕೆ ನೀರು ತಲುಪದೇ ಇದ್ದರೆ  ಭಾಗದ ಹಳ್ಳಿಗಳ ಕುಡಿಯುವ ನೀರಿನ ಬೋರ್‌ಗಳ ವಿಫಲವಾಗಿ ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ. ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರು ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ಚುನಾವಣಾ ಹೊಸ್ತಿಲಿನಲ್ಲಿ ಈಡೇರಿಸಲು ಅಸಾಧ್ಯವಾದ ಬೇಡಿಕೆ ಗಳನ್ನು ಇಟ್ಟುಕೊಂಡು ದೆಹಲಿಯಲ್ಲಿ ಹೋರಾಟ ನಡೆಸಲಾಗುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಕೆಡಿಸುವ ಯತ್ನ ಎಂದು ಸತೀಶ್ ಆರೋಪಿಸಿದರು.

ಜಿಲ್ಲೆಯಲ್ಲಿ ಶುದ್ಧ ನೀರಿನ ಘಟಕಗಳು ದುಃಸ್ಥಿತಿಯಲ್ಲಿದ್ದು ಶೀಘ್ರವೇ ಸರಿಪಡಿಸ ಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವರಾಜ್ ಪಾಟೀಲ್, ಐಗೂರು ಲಿಂಗರಾಜ್, ಧನಂಜಯ ಕಡ್ಲೇಬಾಳು, ಅನಿಲ್ ಕುಮಾರ್ ನಾಯಕ್, ಜಿ.ಕೊಟ್ರೇಶ್ ಗೌಡ, ಹೆಚ್.ಪಿ. ವಿಶ್ವಾಸ್, ಶಶಿಕುಮಾರ್ ಹಾಗೂ ಇತರರಿದ್ದರು.

error: Content is protected !!