ಅಲ್ಪತನ ಬಿಟ್ಟು ವಿಶ್ವಮಾನವತೆ ಬೇಕಿದೆ : ಚಿದಾನಂದ ಗೌಡ

ಅಲ್ಪತನ ಬಿಟ್ಟು ವಿಶ್ವಮಾನವತೆ ಬೇಕಿದೆ : ಚಿದಾನಂದ ಗೌಡ

ಸಿರಿಗೆರೆ, ಫೆ. 25 – ಕುವೆಂಪು ಅವರ ಪಂಚ ಮಂತ್ರಗಳಾದ ವಿಶ್ವಮಾನವ, ಮನುಜಮತ,  ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಟಿಗಳು ಈಗಿನ ಕಾಲಕ್ಕೆ ಅತ್ಯಗತ್ಯವಾಗಿವೆ ಎಂದು ಮೈಸೂರಿನ ವಿಶ್ರಾಂತ ಕುಲಪತಿ ಕೆ. ಚಿದಾನಂದ ಗೌಡ ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯಲ್ಲಿ ತರಳ ಬಾಳು ಮಠದಲ್ಲಿ ಆಯೋಜಿಸಲಾಗಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ನಾವು ಹುಟ್ಟುವಾಗ ವಿಶ್ವಮಾನವರೇ ಆಗಿರುತ್ತವೆ. ಬೆಳೆಯು ತ್ತಾ ಜಾತಿ, ಮತಗಳು ಸೇರಿಕೊಂಡು ಅಲ್ಪ ಮಾನವರಾಗುತ್ತೇವೆ. ಈ ಅಲ್ಪತನವನ್ನು ಬಿಟ್ಟು ಹೊರ ಬಂದು ಮತ್ತೆ ವಿಶ್ವಮಾನ ವರಾಗಬೇಕಿದೆ. ಕುವೆಂಪು ಅವರು ವಿಶ್ವಮಾನವತೆಯೇ ತಮ್ಮ ಅತಿ ದೊಡ್ಡ ಸಂದೇಶ ಎಂದು ತಿಳಿಸಿದ್ದರು ಎಂದು ಹೇಳಿದರು.

ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ, ಸರ್ಕಾರ ಐದು ಗ್ಯಾರಂಟಿಗಳನ್ನು ನೀಡಿದೆ. ಆದರೆ, ಸಿರಿಗೆರೆ ಮಠ ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರ ಸಂಕಷ್ಟ ನಿವಾರಿಸುವ ಗ್ಯಾರಂಟಿ ನೀಡಿದೆ. ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಭಗೀರಥ ಪ್ರಯತ್ನದಿಂದ ನೀರು ತಂದು ರೈತರಲ್ಲಿ ಮಂದಹಾಸ್‌ ಮೂಡಿಸಿದ್ದಾರೆ ಎಂದರು.

ನೀರಾವರಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಮಾತನಾಡಿ, ತರಳಬಾಳು
ಜಗದ್ಗುರುಗಳ ಪ್ರಯತ್ನದಿಂದಾಗಿಯೇ ಭರಮಸಾಗರ ಹಾಗೂ ಜಗಳೂರು ಕೆರೆ ನೀರು ಯೋಜನೆಗಳು ಜಾರಿಗೆ ಬಂದಿವೆ. ಒಂದೇ ಸಂಪುಟದಲ್ಲಿ ಈ ಎರಡೂ ಯೋಜನೆಗಳಿಗೆ ತಲಾ 600 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿತ್ತು. ನನ್ನ ಜೀವನದಲ್ಲೇ ಇಷ್ಟು ದೊಡ್ಡ ಮೊತ್ತ ಬಿಡುಗಡೆಯಾಗಿದ್ದನ್ನು ನೋಡಿರಲಿಲ್ಲ ಎಂದು ತಿಳಿಸಿದರು.

ಕೋವಿಡ್ ನಡುವೆಯೂ ಅತ್ಯಲ್ಪ ಅವಧಿಯಲ್ಲಿ ಭರಮಸಾಗರ ಕೆರೆ ಕಾಮಗಾರಿ ಜಾರಿಗೊಂಡಿದೆ. ಈ ಬಾರಿ ಮಳೆ ಬಾರದೇ ಇದ್ದರೂ ಭರಮಸಾಗರ ಕೆರೆ ತುಂಬಿದೆ. ಇದಕ್ಕೆಲ್ಲ ಶ್ರೀಗಳ ಪ್ರಯತ್ನವೇ ಕಾರಣ ಎಂದರು.

ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಭಾರತೀಯ ಸಮಾಜ ಇಂದು ಸಮೃದ್ಧವಾಗಿದೆ. ಆದರೆ, ಕುಟುಂಬಗಳು ಶಿಥಿಲವಾಗುತ್ತಿವೆ. ತಂದೆ – ತಾಯಿಗಳನ್ನು ಮಕ್ಕಳು ಕಡೆಗಣಿಸುತ್ತಿದ್ದಾರೆ. ಇಂತಹ ಪ್ರವೃತ್ತಿ ಬದಲಾಗಬೇಕು ಎಂದು ಹೇಳಿದರು.

ಉದ್ಯಮಿ ಜಿ.ಎಸ್. ಅನಿತ್ ಮಾತನಾಡಿ, ರಾಜನಹಳ್ಳಿ, ಭರಮಸಾಗರ, ಜಗಳೂರು, ಚನ್ನಗಿರಿ, ಹರಪನಹಳ್ಳಿ ಮುಂತಾದ ಭಾಗಗಳಲ್ಲಿ ಶ್ರೀಗಳು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾಗುವಂತೆ ಮಾಡಿದ್ದಾರೆ. ಕೆರೆಗಳಿರುವ ಜಾಗಗಳಲ್ಲಿ ಈ ಬರದಲ್ಲೂ ನೆಮ್ಮದಿ ಇದೆ ಎಂದು ಹೇಳಿದರು.

ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಮಾತನಾಡಿ, ರೈತರು 140 ಕೋಟಿ ಜನರ ಆಹಾರ ಭದ್ರತೆ ಒದಗಿಸಿದ್ದಾರೆ. ಆದರೆ, ರೈತರ ಸಮಸ್ಯೆಗಳು ಅಗಾಧವಾಗಿ ಉಳಿದಿವೆ. ರೈತರ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡಬೇಕಿದೆ ಎಂದರು.

error: Content is protected !!