22ರಿಂದ ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ

22ರಿಂದ ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ

ಸಿರಿಗೆರೆ,ಫೆ.15- ಇಲ್ಲಿನ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ, ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಗಳ ಸಾನ್ನಿಧ್ಯದಲ್ಲಿ ಇದೇ ದಿನಾಂಕ 22ರಿಂದ 24ರವರೆಗೆ `ತರಳಬಾಳು ಹುಣ್ಣಿಮೆ ಮಹೋತ್ಸವ-2024′ ಹಮ್ಮಿಕೊಳ್ಳಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ಈ ಬಾರಿ ನಡೆಯಬೇಕಾಗಿದ್ದ ಈ ಹುಣ್ಣಿಮೆ ಕಾರ್ಯಕ್ರಮವನ್ನು ಬರಗಾಲದ ಕಾರಣ ಸಿರಿಗೆರೆಯಲ್ಲಿಯೇ ಸರಳ ಮತ್ತು ಸಾಂಪ್ರದಾಯಿಕವಾಗಿ ಮೂರು ದಿನಗಳ ಕಾಲ ನೆರವೇರಿಸಲು ಶ್ರೀ ತರಳಬಾಳು ಜಗದ್ಗುರು ಡಾ. ಸ್ವಾಮೀಜಿ ಆಶಯ ವ್ಯಕ್ತಪಡಿಸಿದ ಕಾರಣವಾಗಿ ಈ ಕಾರ್ಯಕ್ರಮ ಏರ್ಪಾಡಾಗಿದೆ.

ದಿನಾಂಕ 22ರ ಬೆಳಿಗ್ಗೆ 9.30ಕ್ಕೆ ಬೆಂಗಳೂರಿನ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೆಚ್.ಎಂ.ವಿರೂಪಾಕ್ಷಯ್ಯ ಅವರು ಶಿವ ಧ್ವಜಾ ರೋಹಣ ಮಾಡುವ ಮೂಲಕ ತರಳಬಾಳು ವಿಜ್ಞಾನ ಮೇಳಕ್ಕೆ ಚಾಲನೆ  ನೀಡಲಿದ್ದಾರೆ. ಯುವ ಚಿಂತನ ಗೋಷ್ಠಿ, ಮಹಿಳಾ ಚಿಂತನಗೋಷ್ಠಿ ಸೇರಿ ದಂತೆ, ವಿಜ್ಞಾನಿಗಳೊಂದಿಗೆ ಸಂವಾದ, ವಿಜ್ಞಾನ ಚಟುವಟಿಕೆಗಳ ಪ್ರಾತ್ಯಕ್ಷಿಕೆ, ಪುಸ್ತಕ ಲೋಕಾರ್ಪಣೆ  ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೇ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಸಹ ಆಯೋಜಿಸ ಲಾಗಿದೆ.

ಕಳೆದ 75 ವರ್ಷಗಳಿಂದ  ನಾಡಿನ ಎಲ್ಲೆಡೆ ಮತ್ತು ಹೊರನಾಡಿನಲ್ಲಿಯೂ  ಆಚರಿಸಿಕೊಂಡು ಬರಲಾಗುತ್ತಿ ರುವ ವಾರ್ಷಿಕ ಸಮಾರಂಭ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ನಾಡಹಬ್ಬದಂತೆ, ಸರ್ವ ಜನರು ಆಚರಿಸುತ್ತಿದ್ದು, ಜಾತಿ,  ಮತ, ಪ್ರಾಂತ್ಯ-ಪ್ರದೇಶಗಳ ಭೇದವಿಲ್ಲದೇ  ಎಲ್ಲರನ್ನೂ ಸದ್ಧರ್ಮದ ಬೆಸುಗೆಯಲ್ಲಿ ಒಗ್ಗೂಡಿಸುವ ಭಾವೈಕ್ಯ ಸಂಗಮದ ಕಾರ್ಯಕ್ರಮವಾಗಿದೆ.

ಬಸವಾದಿ ಶಿವಶರಣರ ಹಿರಿಯ ಸಮಕಾಲೀನರಾದ ವಿಶ್ವಬಂಧು ಮರುಳಸಿದ್ಧರು, ಅಂದಿನ ಸಮಾಜವನ್ನು ಪಟ್ಟಭದ್ರ ಹಿತಾಸಕ್ತಿಗಳ ಶೋಷಣೆಯಿಂದ ರಕ್ಷಿಸಲು ಆಜೀವ ಪರ್ಯಂತ ಹೋರಾಡಿ, ಧರ್ಮದ ತಳಹದಿಯ ಮೇಲೆ ತರತಮ ವಿಲ್ಲದ ಸಮಾಜವನ್ನು ನಿರ್ಮಿಸುತ್ತಾರೆ. ಸದ್ಧರ್ಮ ಪೀಠವನ್ನು ಸ್ಥಾಪಿಸಿ, ಮಾಘ ಶುದ್ಧ ಪೂರ್ಣಿಮೆಯಂದು ತಮ್ಮ ಶಿಷ್ಯ ತೆಲಗುಬಾಳು ಸಿದ್ದನನ್ನು ಆ ಪೀಠದಲ್ಲಿ ಕುಳ್ಳಿರಿಸಿ `ತರಳಾ, ಬಾಳು’ ಎಂದು ಹರಸುತ್ತಾರೆ. ಈ ಆಶೀರ್ವಾದದ ಪರಂಪರೆಯಲ್ಲಿ ಸಾಗಿ ಬಂದ ಸದ್ಧರ್ಮ ಪೀಠಾಧಿಪತಿಗಳೇ `ತರಳಬಾಳು’ ಜಗದ್ಗುರುಗಳು ಎಂದು ಹೆಸರಾಗಿದ್ದಾರೆ.

ಈ ಚಾರಿತ್ರ್ಯಿಕ ಹುಣ್ಣಿಮೆ ಮಹೋತ್ಸವವನ್ನು ಜಾತಿ, ಮತ ಮತ್ತು ಪಂಥಗಳ ಚೌಕಟ್ಟನ್ನು ಮೀರಿ ನಾಡಿನ ಜನರ ಭಾವೈಕ್ಯತೆಯ ಹುಣ್ಣಿಮೆಯನ್ನಾಗಿ ರೂಪಿಸಿದ ಕೀರ್ತಿ 20ನೇ ಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ  ಶಿವಾಚಾರ್ಯ ಸ್ವಾಮೀಜಿಯವರಿಗೆ ಸಲ್ಲುತ್ತದೆ. ಅಲ್ಲದೇ ಶ್ರೀ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ನೇತೃತ್ವ ವಹಿಸಿಕೊಂಡ ನಂತರ, ತರಳಬಾಳು ಹುಣ್ಣಿಮೆ ಮಹೋತ್ಸವ   ಹೊಸ ಆಯಾಮವನ್ನೇ ಪಡೆದಿದೆ.

ಇದೇ ದಿನಾಂಕ 24ರಂದು ಮಾಘ ಶುದ್ಧ ಹುಣ್ಣಿಮೆಯಂದು ಶ್ರೀ ತರಳಬಾಳು ಜಗದ್ಗುರುಗಳವರು ಸದ್ಧರ್ಮ ಸಿಂಹಾಸನಾ ರೋಹಣ ಮಾಡಿ, ಭಕ್ತರಿಗೆ ದರ್ಶನ ಮತ್ತು ಆಶೀರ್ವಾದ ನೀಡಲಿದ್ದಾರೆ.  

error: Content is protected !!