`ತಪೋವನ’ ಹೆಸರನ್ನು ನಾಡಿನ ಉದ್ದಗ ಲಕ್ಕೂ ಪಸರಿಸುವಂತೆ ಮಾಡಿ, ದೇಶದ ಅನೇಕ ರಾಜ್ಯಗಳಿಂದಲೂ ವಿದ್ಯಾರ್ಥಿ ಸಮೂಹವನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಯುವೋ ತ್ಸಾಹಿಯೇ ಡಾ. ವಿ.ಎಂ. ಶಶಿಕುಮಾರ್.
ಹುಟ್ಟಿದ್ದು 1969ರ ಜುಲೈ 5 ಹರಿಹರದ ದಿ.ವಾಸುದೇವಸಾ ಮೆಹರ್ವಾಡೆ ಮತ್ತು ಶ್ರೀಮತಿ ಲಕ್ಷ್ಮೀಬಾಯಿ ದಂಪತಿಯ ಮಗ ಶಶಿಕುಮಾರ್. ಹುಟ್ಟಿದೂರಿನಲ್ಲಿ ಕಾಲೇಜು ಶಿಕ್ಷಣ ಪಡೆದ ಇವರು, ದೂರದ ಇಂಗ್ಲೆಂಡಿನ ಡರ್ ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ. ಶಿಕ್ಷಣ ಪಡೆದಿದ್ದಾರೆ.
ಹೆತ್ತವರು ರೂಢಿಯಾಗಿಸಿಕೊಂಡಿದ್ದ ಆಯುರ್ವೇದ ವೈದ್ಯ ಪದ್ಧತಿಯತ್ತ ಆಕರ್ಷಿತರಾಗಿ ದೇಶೀಯ ವೈದ್ಯ ಪದ್ಧತಿಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕೆಂಬ ಹಿನ್ನೆಲೆಯಲ್ಲಿ `ಶ್ರೀ ಶಕ್ತಿ ಅಸೋಸಿಯೇಷನ್’ ಸಂಸ್ಥೆಗೆ ಬೀಜಾಂಕುರ ಮಾಡುತ್ತಾರೆ. ಮಾನವ ಸಂಪನ್ಮೂಲ ಸಚಿವಾಲಯ ಭಾರತದ ಸಹಕಾರದೊಂದಿಗೆ ತಮ್ಮ ಸಂಸ್ಥೆಯ ಮೂಲಕ ಅನೇಕ ರಚನಾತ್ಮಕ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡುತ್ತಾರೆ.
ರಾಜ್ಯದ ಆಯ್ದ ಏಳು ಜಿಲ್ಲೆಗಳಲ್ಲಿ ಅನೇಕ ಜನಪರ ಕಾರ್ಯಗಳನ್ನು ಅನುಷ್ಠಾನಗೊಳಿಸಿದ್ದಾರೆ. ಪ್ರತಿ ವರ್ಷವೂ 10 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ಪರಿಸರ ಕಾಳಜಿಗೆ ತಮ್ಮ ವಿಶಿಷ್ಟ ಕೊಡುಗೆಯನ್ನು ನೀಡಿರುವುದು ಹೆಮ್ಮೆಯ ಸಂಗತಿ. ಆಯ್ದ ಜಿಲ್ಲೆಗಳಲ್ಲಿ ಆಸ್ಪತ್ರೆ, ವೃದ್ಧಾಶ್ರಮ, ಶಾಲೆಗಳನ್ನು ತೆರೆಯುವ ಮೂಲಕ ಸಾಮಾಜಿಕ ಸೇವಾಕಾರ್ಯಕ್ಕೆ ಒತ್ತು ನೀಡಿದ್ದಾರೆ. ಇವರ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿ `ತಪೋವನ’ ಸಂಸ್ಥೆಯು ಸ್ಥಾಪನೆಯಾಗಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದೆ. ಭಾರತೀಯ ವೈದ್ಯ ಪರಂಪರೆಗೆ ಒತ್ತುಕೊಡುವ ಉದ್ದೇಶದ ಹಿನ್ನೆಲೆಯಲ್ಲಿ ಆಯುರ್ವೇದ ಯೋಗ ಹಾಗೂ ಪ್ರಕೃತಿ ಚಿಕಿತ್ಸೆಯನ್ನು ಅಳವಡಿಸಿಕೊಂಡಿರುವುದು ತಪೋವನದ ವೈಶಿಷ್ಟ್ಯವಾಗಿದೆ.
ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುವ ಇವರಿಗೆ 2022ರಲ್ಲಿ ದಾವಣಗೆರೆ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಪುರಸ್ಕರಿಸಿದೆ.
ಶಶಿಕುಮಾರ್ ಮೆಹರ್ವಾಡೆ ಅವರನ್ನು `2023 ರ ವರ್ಷದ ವ್ಯಕ್ತಿ’ ಪುರಸ್ಕಾರಕ್ಕೆ `ಜಿಲ್ಲೆ ಸಮಾಚಾರ’ ಪತ್ರಿಕಾ ಬಳಗವು ಆಯ್ಕೆಯ ನಿರ್ಧಾರ ಕೈಗೊಂಡಿದೆ.
ಪ್ರಶಸ್ತಿ ಪ್ರದಾನ : ಜಿಲ್ಲೆ ಸಮಾಚಾರ ಪತ್ರಿಕಾ ಬಳಗದ ವತಿಯಿಂದ 2023 ನೇ ಸಾಲಿನ `ವರ್ಷದ ವ್ಯಕ್ತಿ’ ಪ್ರಶಸ್ತಿ ಪ್ರದಾನ ಸಮಾರಂಭವು ಇಂದು ಸಂಜೆ 5.30 ಕ್ಕೆ ಶಿವಯೋಗ ಮಂದಿರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಸಂಚಾಲಕ ಸಾಲಿಗ್ರಾಮ ಗಣೇಶ ಶೆಣೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದೊಡ್ಡಬಾತಿ ತಪೋವನ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ. ವಿ.ಎಂ. ಶಶಿಕುಮಾರ್ ಅವರಿಗೆ `ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿಶ್ರಾಂತ ಲೋಕಾಯುಕ್ತ ಸಂತೋಷ್ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಶ್ರೀ ಬಸವ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮೈಸೂರಿನ ಹಿರಿಯ ಸಾಹಿತಿ ಪ್ರೊ. ಹರಿಶಂಕರ್ ಆಶಯ ನುಡಿಗಳನ್ನಾಡಲಿದ್ದು, ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಂಸದ ಜಿ.ಎಂ. ಸಿದ್ದೇಶ್ವರ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪತ್ರಿಕಾ ಬಳಗದ ಸಂಸ್ಥಾಪಕ ವಿ. ಹನುಮಂತಪ್ಪ, ಪದಾಧಿಕಾರಿಗಳಾದ ಸತ್ಯಭಾಮ ಮಂಜುನಾಥ್, ಹಿರಿಯ ನ್ಯಾಯವಾದಿ ರಾಮಚಂದ್ರ ಕಲಾಲ್, ಮಹಾಂತೇಶ್ ವಿ. ಒಣರೊಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.