ಕಮೀಷನ್ ಆರೋಪದ ಸಿಬಿಐ ತನಿಖೆ ಆಗಲಿ : ವಿಪಕ್ಷ ನಾಯಕ ಅಶೋಕ್‌

ಹರಿಹರ, ಫೆ.9 – ಮಂತ್ರಿಗಳು, ಶಾಸಕರ ಹೆಸರನ್ನು ಹೇಳಿಕೊಂಡು ಅಧಿಕಾರಿಗಳು ಶೇ.40 ಹಣ ವಸೂಲು ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಕೆಂಪಣ್ಣ ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. 

ಹರಿಹರ ತಾಲ್ಲೂಕಿನ ರಾಜನಹಳ್ಳಿಗೆ ಮಹರ್ಷಿ ವಾಲ್ಮೀಕಿ ಜಾತ್ರೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆಯಿಂದ ದಾಳಿ ಮಾಡಿದಾಗ ನೂರಾರು ಕೋಟಿ ರೂ. ಹಣ ಪತ್ತೆಯಾಗಿದೆ ಎಂದು ಹೇಳಿದರು.

 ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಲೂಟಿ ಮಾಡುತ್ತಿದೆ. ಇದೊಂದು ಲೂಟಿಕೋರರ ಸರ್ಕಾರ ಎಂದು ಅವರು ಆರೋಪಿಸಿದರು. 

ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಇದೇ ಗುತ್ತಿಗೆದಾರರ ಸಂಘದ ಕೆಂಪಣ್ಣನನ್ನು ಮುಂದಿಟ್ಟುಕೊಂಡು, ಕಾಂಗ್ರೆಸ್ಸಿನವರೇ ಅಭಿಯಾನ ಮಾಡಿದ್ದರು. ಈಗ ಅದೇ ಕೆಂಪಣ್ಣ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದಾರೆ. ಸಿದ್ದರಾಮಯ್ಯನವರೇ ಶೇ.40 ಕಮೀಷನ್ ಎನ್ನುವಂತಾಗಿದೆ ಎಂದು ಅವರು ಲೇವಡಿ ಮಾಡಿದರು. 

ಸಿದ್ದರಾಮಯ್ಯ ಸರ್ಕಾರಕ್ಕೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ಇಲ್ಲ. ಒಂದಿಷ್ಟಾದರೂ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡಿ, ಅಧಿಕಾರದಿಂದ ಕೆಳಗಿಳಿಯಲಿ. ಆರೋಪವನ್ನು ಸಿ.ಬಿ.ಐ. ತನಿಖೆಗೆ ವಹಿಸಲಿ ಎಂದು ಅಶೋಕ್ ಒತ್ತಾಯಿಸಿದರು.

 ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಕುರಿತಂತೆ ದಾಖಲೆಗಳನ್ನು ನೀಡುವುದಾಗಿ ಸ್ವತಃ ಕೆಂಪಣ್ಣ ಕರೆ ಮಾಡಿದ್ದರು. ಅವರು ದಾಖಲೆಗಳನ್ನು ತಂದು ಕೊಡಲಿ. ಕಾಂಗ್ರೆಸ್ ಸರ್ಕಾರದ ಶೇ.40 ಕಮೀಷನ್
ದಂಧೆಯ ಕುರಿತಂತೆ ವಿಧಾನಸೌಧದ ಒಳಗೆ ಹಾಗೂ ಹೊರಗೆ ನಾವು ಹೋರಾಟ ಮಾಡುತ್ತೇವೆ ಎಂದೂ ಅವರು ಹೇಳಿದರು.

error: Content is protected !!