ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ದುಶ್ಚಟ ನಿವಾರಣೆಗೆ ಹಲವು ಕ್ರಮಗಳು

ದಾವಣಗೆರೆ, ಡಿ. 29- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಭಾಗದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಜನರನ್ನು ವ್ಯಸನಮುಕ್ತರನ್ನಾಗಿ ಮಾಡಲು ನಿರಂತರವಾಗಿ ಶ್ರಮಿಸುತ್ತಿದೆ ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಹೊಸಕೆರೆ ಸುರೇಶ್  ಹೇಳಿದರು.

ಯುವಜನತೆ ಮದ್ಯಪಾನದಂತಹ ಪಿಡುಗಿಗೆ ದಾಸರಾಗುತ್ತಿದ್ದು, ಸಮಾಜದ ಅಭಿವೃದ್ಧಿಯ ವೇಗ ಕುಂಠಿತವಾಗುತ್ತಿರುವುದನ್ನು ಮನಗಂಡು ಡಾ.ಡಿ.ವೀರೇಂದ್ರ ಹೆಗ್ಗಡೆಯವರು 1991ರಲ್ಲಿ ಜನಜಾಗೃತಿ ವೇದಿಕೆ ಹುಟ್ಟು ಹಾಕಿದ್ದರು.

ಅಲ್ಲಿಂದ ನಿರಂತರವಾಗಿ ಶಾಲಾ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಅರಿವು ಮೂಡಿಸುವ  ಕಾರ್ಯವನ್ನು ವೇದಿಕೆ ಮಾಡುತ್ತಿದೆ ಎಂದು ಹೇಳಿದರು.

ವೇದಿಕೆ ಮೂಲಕ ಮದ್ಯವರ್ಜನೆ ಶಿಬಿರ,  ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಮನೆ ಭೇಟಿ ಮತ್ತು ಕೌನ್ಸಿಲಿಂಗ್ ಹಾಗೂ ಅರಿವು ಮೂಡಿಸುವ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಹೊಸ ಕ್ಯಾಲೆಂಡರ್ ವರ್ಷದ ಆರಂಭದಲ್ಲಿ ಸಂಭ್ರಮಿಸಲು ಮದ್ಯಪಾನ ಮಾಡುತ್ತಾರೆ. ಬೇರೆಲ್ಲಾ ದಿನಗಳಿಗಿಂತ ಈ ದಿನಗಳಲ್ಲಿ ಹೆಚ್ಚು ಅಪಘಾತಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 28ರಿಂದ ಜನವರಿ 3ರವರೆಗೆ ಮದ್ಯದಂಗಡಿಗಳನ್ನು  ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಮುಖ್ಯಮಂತ್ರಿಗಳು ರಾಜ್ಯವನ್ನು ಮದ್ಯ ಮಾರಾಟ ಮುಕ್ತ ಮಾಡಬೇಕು ಎಂದು ಮನವಿ ಮಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ದಾವಣಗೆರೆಯಲ್ಲಿ ಕಳೆದ 11 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಜನರ ಪರಿವರ್ತನೆಯಲ್ಲಿ ವಿಶೇಷ ಕೊಡುಗೆ ನೀಡುತ್ತಿದೆ ಎಂದು ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ್ ಹೇಳಿದರು.

ಜಿಲ್ಲಾ ವ್ಯಾಪ್ತಿಯಲ್ಲಿ 885 ಕಾರ್ಯಕರ್ತರು ವಿವಿಧ ಹುದ್ದೆಗಳ ಮೂಲಕ ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಗತಿಗೆ ಸಹಕರಿಸು ತ್ತಿದ್ದಾರೆ. ಇದುವರೆಗೆ 18756 ಸ್ವ ಸಹಾಯ ಸಂಘಗಳನ್ನು ರಚನೆ ಮಾಡಲಾಗಿದ್ದು, 162548 ಸದಸ್ಯರು 132.67 ಕೋಟಿ ರೂ. ಉಳಿತಾಯ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಮನೆ ಬಾಗಿಲಿಗೆ ಬ್ಯಾಂಕಿಗ್ ವ್ಯವಸ್ಥೆ, ಮಹಿಳಾ ಸ್ವಾವಲಂಬನೆಗಾಗಿ  ಹಲವು ಕಾರ್ಯಕ್ರಮಗಳು, ಕೃಷಿ ಅಭಿವೃದ್ಧಿ, ನಮ್ಮೂರು ನಮ್ಮ ಕೆರೆ (ಕೆರೆ ಹೂಳೆತ್ತುವ ಯೋಜನೆ), ಶುದ್ಧ ಗಂಗಾ ಕಾರ್ಯಕ್ರಮ, ವಿಮಾ ಸೌಲಭ್ಯ ಯೋಜನೆ, ಹಸಿರು ಇಂಧನ ಕಾರ್ಯಕ್ರಮ, ಮಾಸಾಶನ ಮತ್ತು ಸುಜ್ಞಾನ ನಿಧಿ ಶಿಷ್ಯವೇತನ ಕಾರ್ಯಕ್ರಮ, ವಾತ್ಸಲ್ಯ ಕಾರ್ಯಕ್ರಮ, ಶ್ರದ್ಧಾ ಕೇಂದ್ರಗಳ ಶುಚಿತ್ವ ಅಭಿಯಾನ, ರೈತ ಸೇವಾ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಜನತೆಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆ ತಾಲ್ಲೂಕು ಯೋಜನಾಧಿಕಾರಿ ಶ್ರೀನಿವಾಸ್, ವೇದಿಕೆಯ ಅಧ್ಯಕ್ಷ ಹೊನ್ನಾಳಿ ಬಾಬಣ್ಣ, ನಿಕಟಪೂರ್ವ ಅಧ್ಯಕ್ಷ  ರಾಜಶೇಖರ್ ಕೊಂಡಜ್ಜಿ, ಸದಸ್ಯರುಗಳಾದ ಗೌಡ್ರು ಚನ್ನಬಸಪ್ಪ, ಕುಸುಮ ಶ್ರೇಷ್ಠಿ, ಜಿಗಳಿ ಪ್ರಕಾಶ್, ಚೇತನಾ ಶಿವಕುಮಾರ್, ಮಹಾಂತೇಶ್ ಜಿ.ಹೆಚ್., ಅಣಬೇರು ಮಂಜಣ್ಣ, ವಿರೂಪಾಕ್ಷಪ್ಪ, ಸಿದ್ದಯ್ಯ, ಶುಭ, ನಾಗರಾಜ ಕತ್ತಿಗೆ, ಮಂಜುನಾಥ ಸರಳಿಮನೆ, ಬಿ.ಎಲ್. ಕುಮಾರ ಸ್ವಾಮಿ, ಲಿಂಗರಾಜು, ಮಂಜುನಾಥ್, ಯೋಗೇಶ್ ಜಿ.ಬಿ. ಉಪಸ್ಥಿತರಿದ್ದರು.

error: Content is protected !!