ದಾವಣಗೆರೆ, ಡಿ. 15- ಜಿಲ್ಲಾ ಭಗೀರಥ ಉಪ್ಪಾರ ಸಂಘದಿಂದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಾಡಿದ್ದು ದಿನಾಂಕ 17 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ `ಭಗೀರಥ ಭಾರತ’ ಜನಕಲ್ಯಾಣ ರಥಯಾತ್ರೆಗೆ ಅದ್ಧೂರಿಯಾಗಿ ಸ್ವಾಗತ ನೀಡಲಾಗುವುದು ಎಂದು ಸಂಘದ ಗೌರವಾಧ್ಯಕ್ಷ ತುರ್ಚಘಟ್ಟದ ಬಸವರಾಜಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೊಡ್ಡಬಾತಿಯಿಂದ ಬೈಕ್ ರಾಲಿ ಮೂಲಕ ರಥಯಾತ್ರೆಯನ್ನು ಬರಮಾಡಿಕೊಳ್ಳಲಾಗುವುದು. ನಂತರ ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ದಿಂದ ಮೆರವಣಿಗೆ ಹೊರಡಲಿದ್ದು ಕುಂಭಮೇಳ, ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಲಿವೆ ಎಂದು ಹೇಳಿದರು.
ಗಾಂಧಿ ವೃತ್ತ, ಅಶೋಕ ರಸ್ತೆ, ಜಯದೇವ ವೃತ್ತದ ಮೂಲಕ ಶಿವಯೋಗಾಶ್ರಮದ ಆವರಣದಲ್ಲಿ ಮೆರವಣಿಗೆ ಮುಕ್ತಾಯಗೊಳ್ಳಲಿದ್ದು, ಇದೇ ವೇಳೆ ಬಹಿರಂಗ ಸಭೆ ನಡೆಸಲಾಗುವುದು ಎಂದರು.
ದೇಶದಲ್ಲಿ ಸುಮಾರು 11 ಕೋಟಿ ಉಪ್ಪಾರ ಜನಸಂಖ್ಯೆ ಇದ್ದು, ಆಯಾ ಪ್ರಾದೇಶಿಕ ಭಾಷೆಗಳಿಗೆ ಅನುಗುಣವಾಗಿ `ಉಪ್ಪಾರರ’ ನ್ನು ವಿವಿಧ ಹೆಸರಿನಿಂದ ಕರೆಯಲ್ಪಡುತ್ತಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕ ಮತ್ತು ರಾಜಕೀಯವಾಗಿ `ಉಪ್ಪಾರ’ ಸಮಾಜವನ್ನು ಮುನ್ನೆಲೆಗೆ ತರುವ ಸದುದ್ಧೇಶದಿಂದ ಈ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ರಥಯಾತ್ರೆ ಬಿಹಾರ್ನಿಂದ ಪ್ರಾರಂಭವಾಗಿ ದೆಹಲಿ, ಪಂಜಾಬ್, ಹರಿಯಾಣ, ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ಪ್ರವಾಸ ಮಾಡಿ, ಡಿ. 9 ರಂದು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಗೆ ಆಗಮಿಸಿದ್ದು, ದಾವಣ ಗೆರೆ ಜಿಲ್ಲೆಯನ್ನು ನಾಳೆ ದಿನಾಂಕ 17 ರಂದು ಪ್ರವೇಶ ಮಾಡಲಿದೆ. ಡಾ. ಪುರುಷೋತ್ತಮಾನಂದ ಪುರಿ ಸ್ವಾಮೀಜಿಯವರ ನೇತೃತ್ವದಲ್ಲಿ ರಥಯಾತ್ರೆ ಯನ್ನು ಬರಮಾಡಿಕೊಳ್ಳ ಲಾಗುವುದು ಎಂದು ಮಾಹಿತಿ ನೀಡಿದರು.
ಇದೇ ವೇಳೆ ಶಾಸಕ ಪುಟ್ಟರಂಗಶೆಟ್ಟಿ ಮೊದಲ್ಗೊಂಡು ರಾಜ್ಯ ಉಪ್ಪಾರ ಸಂಘಗಳ ಪದಾಧಿಕಾರಿಗಳು, ಸದಸ್ಯರು, ಜಿಲ್ಲಾ ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹದಡಿ ರಮೇಶ್, ಹಾಲೇಶ್, ರಾಜಪ್ಪ, ಗಿರೀಶ್, ಲೋಕೇಶ್, ಎಂ.ಎನ್. ಮಂಜುನಾಥ್ ಉಪಸ್ಥಿತರಿದ್ದರು.