ಜಯಕರ್ನಾಟಕ ಸಂಘಟನೆ ಹೋರಾಟಕ್ಕೆ ಎಸ್‌.ರಾಮಪ್ಪ ಸಂಪೂರ್ಣ ಬೆಂಬಲ

ಹರಿಹರ, ಡಿ,13- ನಗರದ ಲೋಕೋಪಯೋಗಿ ಇಲಾಖೆ ಕಚೇರಿಯ ಮುಂದೆ ಜಯಕರ್ನಾಟಕ ಸಂಘ ಟನೆ ವತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಮಾಜಿ ಶಾಸಕ ಎಸ್.ರಾಮಪ್ಪ ಭೇಟಿ ಕೊಟ್ಟು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದರ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವುದರಿಂದ ಇನ್ನೂ ಐದು ದಿನಗಳಲ್ಲಿ ರಸ್ತೆ  ದುರಸ್ತಿ ಪಡಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ಎಸ್. ರಾಮಪ್ಪ ಅವರು,  ನಾನು ಶಾಸಕರಾಗಿದ್ದ ಸಂದರ್ಭದಲ್ಲಿ ಎರಡು ಬಾರಿ ಈ ವಿಚಾರಕ್ಕೆ ಗಲಾಟೆ ಆಯಿತು, ಕಾರಣ ನಾನು ಎರಡು ಕೋಟಿ ಐವತ್ತು ಲಕ್ಷ ರೂ. ಬಿಡುಗಡೆ ಮಾಡಿಸಿಕೊಂಡು ರಸ್ತೆಯನ್ನು ದುರಸ್ತಿ ಪಡಿಸಲು ಮುಂದಾದರೆ, ಶಾಸಕ ಬಿ.ಪಿ. ಹರೀಶ್ ತಮ್ಮ ಸರ್ಕಾರ ಇದೆ ಎಂದು ದಾಂಧಲೆ ಮಾಡಿ ಅಡ್ಡಿಪಡಿಸಿದರು. 

ಆಗ ಸರ್ಕಾರ ಹಣವನ್ನು ವಾಪಸ್‌ ಪಡೆಯಿತು. ತದನಂತರ ಮತ್ತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಇದ್ದ ಸಮಯದಲ್ಲಿ ಮತ್ತೆ ಕಾಮಗಾರಿ ಆರಂಭ ಮಾಡುವುದಕ್ಕೆ ಮುಂದಾದರೆ, ಸಂಸದ ಜಿ.ಎಂ. ಸಿದ್ದೇಶ್ವರ್ ಹಾಗೂ ಶಾಸಕ ಬಿ.ಪಿ. ಹರೀಶ್, ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಸೇರಿದಂತೆ, ಇತರೆ ಬಿಜೆಪಿ ಮುಖಂಡರು ತಡೆದರು.

 ಕಾರಣ ಅವರಿಗೆ ಈ ರಸ್ತೆಯಲ್ಲಿ ದರ್ಗಾ ಇರೋದರಿಂದ ಇಷ್ಟೆಲ್ಲ ಮಾಡುವುದಕ್ಕೆ ಕಾರಣವಾಯಿತು. ಶಾಸಕ ಬಿ.ಪಿ. ಹರೀಶ್ ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಮುಂದಾಗಿದ್ದಾರೆ. ಅವರು ಹೇಳಿದಂತೆ ಅಧಿಕಾರಿಗಳು ಕೇಳಲಿಲ್ಲ ಎಂದಾಗ ಇಷ್ಟೆಲ್ಲಾ ನಡೆದಿದ್ದು, ಸರ್ಕಾರ ನಮ್ಮದೇ ಇರುವುದರಿಂದ ನಾನು ಇನ್ನೂ ನಾಲ್ಕು, ಐದು ದಿನಗಳಲ್ಲಿ ರಸ್ತೆಯನ್ನು ದುರಸ್ತಿ ಪಡಿಸಲು ಮುಂದಾಗುವುದಾಗಿ ಹೇಳಿದರು.

ಜಯಕರ್ನಾಟಕ ಸಂಘಟನೆ ಮುಖಂಡ ಗೋವಿಂದ ಮಾತನಾಡಿ, ನಮಗೆ ಯಾವುದೇ ಪಕ್ಷ ಅಥವಾ ಜಾತಿ ಮುಂದೆ ಇಟ್ಕೊಂಡು ಹೋರಾಟ ಮಾಡುತ್ತಿಲ್ಲ. ನಮಗೆ ಬೇಕಾಗಿರುವ ರಸ್ತೆಯನ್ನು ಆದಷ್ಟು ಬೇಗ ದುರಸ್ತಿ ಪಡಿಸಿ, ಆ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂಬುದಾಗಿದೆ. ಹಾಗಾಗಿ ಮಾಜಿ ಶಾಸಕ ರಾಮಪ್ಪ ಐದು ದಿನಗಳಲ್ಲಿ ದುರಸ್ತಿ ಪಡಿಸುವುದಾಗಿ ಭರವಸೆಯನ್ನು ನೀಡಿದ್ದಾರೆ. ಆದರೆ ರಸ್ತೆಯನ್ನು ದುರಸ್ತಿ ಪಡಿಸುವವರೆಗೆ ನಮ್ಮ ಧರಣಿ ನಿರಂತರವಾಗಿ ಮಾಡುವುದಾಗಿ ಹೇಳಿದರು. 

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಭಾಗ್ಯಮ್ಮ, ಜಯಕರ್ನಾಟಕ ಸಂಘಟನೆಯ ಆನಂದ್, ಮಂಜುನಾಥ್ ಶಬರಿಶ ಇತರರು ಹಾಜರಿದ್ದರು.

error: Content is protected !!