ಭಾರತ ಇನ್ನೂ ಸರ್ವಜನಾಂಗದ ಶಾಂತಿಯ ತೋಟ ಆಗಿಲ್ಲ

ಭಾರತ ಇನ್ನೂ ಸರ್ವಜನಾಂಗದ ಶಾಂತಿಯ ತೋಟ ಆಗಿಲ್ಲ

ಕಲಬುರ್ಗಿಯಲ್ಲಿ ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶ್ರೀ ವಿಷಾದ

ಸಾಣೇಹಳ್ಳಿ, ಡಿ. 13-   ಬುದ್ಧ, ಬಸವ, ಗಾಂಧಿ ಮತ್ತು ಅಂಬೇಡ್ಕರ್ ಮುಂತಾದವರು ದೇಶದಲ್ಲಿ ನಮ್ಮ ಪ್ರಜ್ಞೆಯನ್ನು ಜಾಗೃತಗೊಳಿಸಿದರು. ಮಲಗಿದ ಜನರನ್ನು ಎಚ್ಚರಿಸಿದವರು. ಜಡತ್ವವನ್ನು ಹೋಗಲಾಡಿಸಿದವರು ಎಂದು ಶ್ರಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕಲಬುರ್ಗಿಯ ಡಾ. ಬಿ. ಆರ್ ಅಂಬೇಡ್ಕರ್ ಪ್ರತಿಮೆಯ  ಸ್ಥಳದಲ್ಲಿ ಜರುಗಿದ 67ನೇ ಮಹಾ ಪರಿನಿರ್ವಾಣ ದಿನ ಮತ್ತು ಡಾ. ಅಂಬೇಡ್ಕರರ ಚಳವಳಿ ಕುರಿತ ಪುಸ್ತಕ ಬಿಡುಗಡೆ ಮಾಡಿ ಸ್ವಾಮೀಜಿ ವಿಶೇಷ ಉಪನ್ಯಾಸ ನೀಡಿದರು.

ಭಾರತ ಸರ್ವ ಜನಾಂಗದ ಶಾಂತಿಯ ತೋಟ ಎಂದು ಕುವೆಂಪು  ಹೇಳಿದರು. ಆದರೆ ಇನ್ನೂ ಸರ್ವಜನಾಂಗದ ಶಾಂತಿಯ ತೋಟ ಆಗಿಲ್ಲ. ಎಲ್ಲ ಕಡೆ ಏನೇನೋ ಕೋಲಾಹಲ, ಗಲಭೆ, ಜಾತಿಯ ಸಂಘರ್ಷ, ಬಡವ ಮತ್ತು ಶ್ರೀಮಂತರ ನಡುವಿನ ಹೋರಾಟ, ಸ್ತ್ರೀ-ಪುರುಷರ ಅಸಮಾನತೆ ಇವು 21ನೆಯ ಶತಮಾನದಲ್ಲೂ ಹಾಗೆಯೇ ಉಳಿದುಕೊಂಡು ಬಂದಿರುವುದು ವಿಷಾದದ ಸಂಗತಿ ಎಂದು  ನುಡಿದರು.  

ಸ್ವಾತಂತ್ರ್ಯ ಯಾರಿಗೆ ಬಂದಿದೆ? ಎನ್ನುವ ಪ್ರಶ್ನೆ ಹಾಕಿದರೆ ಕೆಲವರಿಗೆ ಮಾತ್ರ ಬಂದಿದೆ ಅಂತ ಬಹುತೇಕ ಜನರಲ್ಲಿ ಈಗಲೂ ಅನುಮಾನ ಮೂಡುತ್ತಾ ಇದೆ. ಬುದ್ಧ, ಬಸವ, ಅಂಬೇಡ್ಕರ್‍ ಹೋರಾಟವನ್ನು ನೆನಪಿಸಿಕೊಂಡು ಆ ದಾರಿಯಲ್ಲಿ ನಡೆಯುವಂಥ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. 

ಬುದ್ಧ ಶ್ರೀಮಂತರ ಮನೆಯಲ್ಲಿ ಹುಟ್ಟಿದರೂ ಬಡತನ, ದುಃಖ, ನೋವು, ಸಾವು, ರೋಗ, ಮುಪ್ಪುಗಳನ್ನು ಕಂಡಾಗ, ಇವುಗಳಿಗೆ ಪರಿಹಾರ ಇಲ್ಲವೇ ಎಂದು ಯೋಚನೆ ಮಾಡಿದಂಥವರು. ಆ ಕಾರಣಕ್ಕಾಗಿ ಹುಟ್ಟಿದ ಮನೆಯನ್ನು, ಕಟ್ಟಿಕೊಂಡ ಹೆಂಡತಿಯನ್ನು, ಮುದ್ದಾದ ಮಗುವನ್ನು ಬಿಟ್ಟು ಜ್ಞಾನದ ಹುಡುಕಾಟ ಆರಂಭಿಸಿ. ಅನೇಕ ಸಾಧು ಸಂತರರನ್ನು ಕಾಣುತ್ತಾರೆ. ಆದರೆ ಇದಕ್ಕೆ ಸೂಕ್ತ ಪರಿಹಾರ ಸಿಗದೇ ಕೊನೆಗೆ ತಮಗೆ ತಾವೇ ಅದಕ್ಕೆ ಪರಿಹಾರ ಕಂಡುಕೊಂಡು ಬುದ್ಧ ಆಗ್ತಾರೆ. ಬುದ್ಧ ಎಂದರೆ ತನಗೆ ತಾನೇ ಅರಿವನ್ನು ಪಡೆದುಕೊಂಡವನು.  ಅರಿವನ್ನು ಪಡೆದುಕೊಂಡು ಸಮಾಜದಲ್ಲಿರುವ ಅಜ್ಞಾನವನ್ನು ಕಳೆಯಲಿಕ್ಕೆ ಹೋರಾಟ ಮಾಡಿದವರು. ಆದರೆ ಬುದ್ಧನ ಹೋರಾಟವನ್ನು ಭಾರತೀಯರು ಅರ್ಥ ಮಾಡಿಕೊಳ್ಳಲಿಲ್ಲ. ಪಟ್ಟಭದ್ರ ಹಿತಾಸಕ್ತರು ಬುದ್ಧದೇವನನ್ನು ಈ ನಾಡಿನಿಂದ ಓಡಿಸಿದರು. 

ನಂತರ ಬಸವಣ್ಣನವರು ಬಂದರು. ಬಸವಣ್ಣನವರು ಯಾವ ಧರ್ಮದಲ್ಲಿ ಅಸಮಾನತೆ, ಅನ್ಯಾಯ, ಶೋಷಣೆ ಇದೆಯೋ ಅವುಗಳ ವಿರುದ್ಧ ಬಂಡೆದ್ದರು. ಧರ್ಮ ಎಂದರೆ ಭಯವಲ್ಲ; ದಯೆ ಎಂದು ಹೇಳಿದರು. ಈಗಲೂ ಧರ್ಮ ಎಂದರೆ ಕೋಣ, ಕುರಿ, ಕೋಳಿ ಕಡಿದು ದೇವರಿಗೆ ಅರ್ಪಿಸಬೇಕೆಂಬ ಕೆಟ್ಟ ಮೂಢಾಚರಣೆ ಇದೆ. ಇವೆಲ್ಲ ಪಟ್ಟಭದ್ರ ಹಿತಾಸಕ್ತರು ನಮ್ಮನ್ನು ತುಳಿಯಲಿಕ್ಕೆ ಮಾಡಿದಂತಹ ಸಂಚುಗಳು ಎಂದು ಹೇಳಿದರು. 

ಮಹಾತ್ಮ ಗಾಂಧೀಜಿಯವರು ಅಸ್ಪೃಶ್ಯತೆ ಯನ್ನು ತೊಡೆದು ಹಾಕಲಿಕ್ಕೆ ಏನೆಲ್ಲಾ ಹೋರಾಟ ಮಾಡಿದರು. ನನಗೇನಾದರೂ ಮುಂದಿನ ಜನ್ಮವೇನಾದರೂ ಇದ್ದರೆ ಅಸ್ಪೃಶ್ಯನಾಗಿಯೇ ಹುಟ್ಟುತ್ತೇನೆಂದು ಹೇಳಿದರು. ಇದಕ್ಕಿಂತ ವಿಭಿನ್ನವಾಗಿ ಆಲೋಚನೆ ಮಾಡಿದವರು ಬಾಬಾ ಸಾಹೇಬ್ ಅಂಬೇಡ್ಕರ್‍ರವರು.  ಮುಂದಿನ ಜನ್ಮದಲ್ಲಿ ಏಕೆ ಹುಟ್ಟಿ ಬರ್ತೀರಿ ಇದೇ ಜನ್ಮದಲ್ಲಿ ಅಸ್ಪೃಶ್ಯತೆಯನ್ನು ಯಾಕೆ ತೊಡೆದು ಹಾಕ ಬಾರದೆಂದು ಗಾಂಧೀಜಿಯವರನ್ನು ಅಂಬೇಡ್ಕರ್ ಪ್ರಶ್ನೆ ಮಾಡ್ತಾರೆ. 

ಅಂಬೇಡ್ಕರ್‌ರವರು ಬಾಲ್ಯದಿಂದಲೂ   ಯಾತನೆ  ಅನುಭವಿಸಿದರು. ಬಹುಶಃ ಅವರಂತಹ ಪ್ರಗತಿಪರ ಚಿಂತಕರು   ಭಾರತದಲ್ಲಿ ಮತ್ತೊಬ್ಬರು ಹುಟ್ಟಿಲ್ಲ. ವಿಶ್ವದಲ್ಲೇ ಇಲ್ಲದೇ ಇರುವ ಸಂವಿಧಾನವನ್ನು ರಚನೆ ಮಾಡಿದರು.  ಸಂವಿಧಾನದಲ್ಲಿ ತುಂಬಿರುವ ಶಕ್ತಿ ಅದ್ಭುತವಾದುದು. ಅದಕ್ಕಾಗಿಯೇ ನಾವೆಲ್ಲರೂ ಹೇಳುವುದು, ಭಾರತೀಯರ ಪ್ರಥಮ ಧರ್ಮ ಗ್ರಂಥ ‘ಸಂವಿಧಾನ’ ಅಂತ. ವಿಷಾದದ ಸಂಗತಿ ಎಂದರೆ,  ಎಷ್ಟು ನಮ್ಮ ಜನಪ್ರತಿನಿಧಿಗಳು  ಸಂವಿ ಧಾನವನ್ನು ಓದಿದ್ದಾರೋ ಗೊತ್ತಿಲ್ಲ ಎಂದರು.

ಬಿಕ್ಕುಣಿ ಸುಮಾನಾ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಪಂಚಶೀಲ ತತ್ವಗಳನ್ನು ಬೋಧಿ ಸಿದರು. ಕಲಬುರ್ಗಿ ಮಹಾನಗರ ಪಾಲಿಕೆ ಆಯುಕ್ತ ರಮೇಶ ಪಟ್ಟೇದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲಬುರಗಿ ಕೇಂದ್ರೀಯ ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ್ ಕೃತಿಯನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಸೂರ್ಯಕಾಂತ ಸುಜಾತ ಮತ್ತು ಉಪನ್ಯಾಸಕ ಶರಣಬಸಪ್ಪ ವಡ್ಡನಕೇರಿ ಅತಿಥಿಗಳಾಗಿ ಮಾತನಾಡಿದರು.

ರವೀಂದ್ರ ಶಾಬಾದಿ, ಪ್ರಬುದ್ದ ಹುಬ್ಬಳ್ಳಿ, ಮಲ್ಲ್ಲಿಕಾರ್ಜುನ ಸುಬಾನೆ ಉಪಸ್ಥಿತರಿದ್ದರು. ಆರಂಭಕ್ಕೆ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

error: Content is protected !!