ಕೆಲಸದ ಹೊರೆ ಏರಿಕೆ, ಸಿಬ್ಬಂದಿ ಕೊರತೆ

ರಾಜ್ಯಾದ್ಯಂತ ಪಶುಪಾಲನಾ ಇಲಾಖೆಯಲ್ಲಿ ಉಲ್ಬಣಿಸಿದ ಸಮಸ್ಯೆ

ದಾವಣಗೆರೆ, ಡಿ. 12 – ಯುದ್ಧ ಮಾಡಬೇಕಿದೆ, ಆದರೆ ಸೈನಿಕರೂ ಇಲ್ಲ – ಸೇನಾಧಿಪತಿಗಳದೂ ಕೊರತೆ. ಈ ಪರಿಸ್ಥಿತಿ ಇರುವುದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ.

ಇಡೀ ರಾಜ್ಯದಲ್ಲಿ ಪಶುವೈದ್ಯಕೀಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ದಾವಣಗೆರೆ ಜಿಲ್ಲೆಯೂ ಇದಕ್ಕೆ ಹೊರತಾ ಗಿಲ್ಲ. ಜಿಲ್ಲೆಯಲ್ಲಿ ಪಶುಪಾಲನಾ ಇಲಾಖೆಯ 614 ಹುದ್ದೆಗಳಿವೆ. ಇದರಲ್ಲಿ 356 ಹುದ್ದೆಗಳು ಖಾಲಿ. ಅಂದರೆ ಶೇ.42ರಷ್ಟು ಹುದ್ದೆಗಳು ಮಾತ್ರ ಭರ್ತಿ ಇವೆ.

ಇಲಾಖೆಯಲ್ಲಿ ಡಿ ದರ್ಜೆ ಉದ್ಯೋಗಿಗಳ ಸಂಖ್ಯೆಯಂತೂ ತೀರಾ ಕಡಿಮೆ ಇದೆ. ಒಟ್ಟು 238 ಹುದ್ದೆಗಳಲ್ಲಿ ಪೂರ್ಣ ಕಾಲಿಕ ಸಿಬ್ಬಂದಿ ಇರುವುದು 33 ಮಾತ್ರ. 88 ಹುದ್ದೆಗೆ ಹೊರಗುತ್ತಿಗೆಯಲ್ಲಿ ನೇಮಿಸಲಾಗಿದೆ. ಹೀಗಾಗಿ ಇಲಾಖೆಯ ಕಾರ್ಯನಿರ್ವಹಣೆ ಮೇಲೆ ತೀವ್ರ ಪರಿಣಾಮವಾಗುತ್ತಿದೆ.

ಉಪ ನಿರ್ದೇಶಕರಿಂದ ಹಿಡಿದು ಡಿ ದರ್ಜೆ ನೌಕರರವರೆಗೆ ಹಲವಾರು ಹುದ್ದೆಗಳು ಖಾಲಿ ಇವೆ. ಹಿರಿಯ ಪಶುವೈದ್ಯ ಪರೀಕ್ಷಕರ ಹುದ್ದೆ 82 ಇದ್ದರೆ, 30 ಖಾಲಿ ಇವೆ. ಪಶು ವೈದ್ಯಕೀಯ ಪರೀಕ್ಷಕರ 61 ಹುದ್ದೆಗಳಲ್ಲಿ 29 ಖಾಲಿ, ಕಿರಿಯ ಪಶುವೈದ್ಯಕೀಯ ಪರೀಕ್ಷಕರ 91 ಹುದ್ದೆಗಳಲ್ಲಿ 70 ಖಾಲಿ ಇವೆ.

ಇಷ್ಟು ಸಾಲದು ಎಂಬಂತೆ, ಜನರ ಬೇಡಿಕೆಯನ್ನು ಪರಿಗಣಿಸಿ ಸರ್ಕಾರ ಹೊಸ ಹೊಸ ಪಶು ಆಸ್ಪತ್ರೆಗಳನ್ನು ತೆರೆಯುತ್ತಿದೆ. ಆದರೆ, ಸಿಬ್ಬಂದಿ ಮಾತ್ರ ನೇಮಿಸುತ್ತಿಲ್ಲ. ಇರುವ ವೈದ್ಯರಿಗೇ ಎರಡೆರಡು ಆಸ್ಪತ್ರೆಗಳ ಹೊಣೆ ನೀಡಲಾಗುತ್ತಿದೆ. ವೈದ್ಯರು ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎಂಬಂತೆ ಪರದಾಡುವ ಪರಿಸ್ಥಿತಿ ಇದೆ.

ಹೊಸದಾಗಿ ನ್ಯಾಮತಿ ತಾಲ್ಲೂಕು ರೂಪಿಸಲಾಗಿದೆಯಾದರೂ, ಅಲ್ಲಿ ವೈದ್ಯಕೀಯ ಸೇವಾ ಕಚೇರಿ ಇಲ್ಲ. ತಾಲ್ಲೂಕಾದರೂ ಹಿಂದಿನಂತೆಯೋ ಪರಿಸ್ಥಿತಿ ಮುಂದುವರೆದಿದೆ.

ಡಿ ದರ್ಜೆ ಉದ್ಯೋಗಿಗಳ ಕೊರತೆ ಇರುವುದರಿಂದ, ಕೆಲವು ಕೇಂದ್ರಗಳಲ್ಲಿ ವೈದ್ಯರೇ ಕಸಬರಿಗೆ ಹಿಡಿಯುವ ಪರಿಸ್ಥಿತಿ ಬಂದಿದೆ. ಕಸ ಹೊಡೆಯುವವರೂ ಅವರೇ, ಚಿಕಿತ್ಸೆ ನೀಡುವವರೂ ಅವರೇ, ಸೆಗಣಿ ಬಾಚುವವರೂ ಅವರೇ ಎಂಬಲ್ಲಿಗೆ ಪರಿಸ್ಥಿತಿ ಬಂದಿದೆ.

ಈ ನಡುವೆ, ಇಲಾಖೆಗೆ ಬರುವ ಅನುದಾನವೂ ಸಮರ್ಪಕವಾಗಿಲ್ಲ. ಜಾನುವಾರುಗಳಿಗೆ ಹೋಲಿಸಿದರೆ ಸರಾಸರಿ 10-15 ರೂ. ಅನುದಾನ ಮಾತ್ರ ಬರುತ್ತಿದೆ. ಚಿಕಿತ್ಸೆ ನೀಡಲು ಇದು ಸಾಲದಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ ಪಶು ವೈದ್ಯ ಸಂಸ್ಥೆಗಳಿಗೆ ಔಷಧ ಪೂರೈಕೆ ಅಸಮರ್ಪಕವಾಗಿದೆ. ಇದರಿಂದಾಗಿ ರಾಸುಗಳ ಚಿಕಿತ್ಸೆಗೆ ಔಷಧಿ ಕೊರತೆಯಾಗಿದೆ. ಇದರಿಂದಾಗಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಪಶು ವೈದ್ಯರು ನಿರಂತರವಾಗಿ ಆಕ್ಷೇಪಣೆಗೆ ಗುರಿಯಾಗಬೇಕಾಗಿದೆ.

ಪಶು ಪಾಲನೆ ರೈತರಿಗೆ ಪ್ರಮುಖ ಆದಾಯದ ಮೂಲವಾಗಿದೆ. ಸಮರ್ಪಕವಾಗಿ ಜಾನುವಾರುಗಳಿಗೆ ಚಿಕಿತ್ಸೆ ದೊರೆತಲ್ಲಿ ರೈತರಿಗೆ ಹಾಗೂ ಗ್ರಾಮೀಣರ ಆದಾಯಕ್ಕೂ ನೆರವಾಗುತ್ತದೆ. ಈ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಿಬ್ಬಂದಿ ಕೊರತೆ ಬಗೆಹರಿಸುವತ್ತ ಸರ್ಕಾರ ಗಮನ ಹರಿಸಬೇಕಿದೆ.

error: Content is protected !!