ಜಗಳೂರು, ಫೆ. 2- ಭಾರತೀಯ ಸಂಸ್ಕೃತಿಯಲ್ಲಿ ಮಾನವೀಯ ಮೌಲ್ಯಗಳು ಜೀವಂತವಾಗಿವೆ ಎಂದು ನಿವೃತ್ತ ಪ್ರಾಂಶುಪಾಲ ಕೆ.ಎಸ್. ಅನಂತರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2000-2001ನೇ ಸಾಲಿನ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ, ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಹಳೇ ವಿದ್ಯಾರ್ಥಿಗಳು ಕಾಲೇಜು ಹಂತವನ್ನು ಸ್ಮರಿಸಿಕೊಂಡು ಆಯೋಜನೆ ಮಾಡುವ ಗುರುವಂದನಾ ಕಾರ್ಯಕ್ರಮಗಳು ನಮ್ಮ ಭವ್ಯ ಸಂಸ್ಕೃತಿಗೆ ಸಾಕ್ಷಿಯಾಗುತ್ತವೆ. ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯನ ವರ್ತನೆ, ಮಾನಸಿಕ ಸಾಮರ್ಥ್ಯದ ಆಲೋಚನೆಗಳು ಬದಲಾಗಿವೆ. ಅದರ ಮಧ್ಯೆಯೂ ತಮ್ಮ ಪ್ರೀತಿ, ಪ್ರಶಂಸೆ, ಗುರುಭಕ್ತಿ ಶಿಕ್ಷಕ ವೃತ್ತಿಗೆ ಮತ್ತಷ್ಟು ಸ್ಪೂರ್ತಿದಾಯಕ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಶಿವಕುಮಾರ್ ಮಾತನಾಡಿ, ಜಗಳೂರಿನಲ್ಲಿ ಸರ್ಕಾರಿ ಕಾಲೇಜು ಇರುವುದೇ ಗೊತ್ತಿಲ್ಲದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆ, ಸ್ವಚ್ಛತೆ, ಉತ್ತಮ ಫಲಿತಾಂಶ ಏರಿಕೆಗೆ ಕಾಳಜಿವಹಿಸಿ ಪ್ರಾಂಶುಪಾಲನಾಗಿ ನನ್ನ ಜವಾಬ್ದಾರಿ ನಿಭಾಯಿಸಿದ ನೆಮ್ಮದಿಯಿದೆ ಎಂದರು.
ಇತ್ತೀಚೆಗೆ ಆಡಳಿತ ಸರ್ಕಾರಗಳು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿರುವುದರಿಂದ ನಿರುದ್ಯೋಗಿ ಪದವೀಧರರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರದ ಅನ್ನ ತಿಂದವರು ಸರ್ಕಾರಿ ಶಾಲೆಗಳನ್ನು ಉಳಿಸಲು ಮುಂದಾಗಿ ಋಣ ತೀರಿಸಬೇಕು. ಶಿಕ್ಷಣ ಪಡೆದವರು ಜಾಗೃತರಾಗದಿದ್ದರೆ ದೇಶದಲ್ಲಿ ಅಪಾಯಕಾರಿ ಬೆಳವಣಿಗೆ ಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಂಶುಪಾಲ ಕೆ.ಎಸ್. ಅನಂತರೆಡ್ಡಿ, ಬಿ.ಆರ್. ಶಿವಕುಮಾರ್, ನಿವೃತ್ತ ಉಪನ್ಯಾಸಕರಾದ ಶಹನಾಜ್ ಬೇಗಂ, ಸಮಿಉಲ್ಲಾ, ರಾಮಚಂದ್ರಪ್ಪ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಪ್ರಾಂಶುಪಾಲ ಜಗದೀಶ್, ಬಿಆರ್ ಸಿ ಡಿ.ಡಿ. ಹಾಲಪ್ಪ, ಉಪನ್ಯಾಸಕರಾದ ಮಂಜುನಾಥ್ ರೆಡ್ಡಿ, ಮಹಮ್ಮದ್ ಬಾಷ, ಹಳೇ ವಿದ್ಯಾರ್ಥಿಗಳಾದ ನಿವೃತ್ತ ಸೈನಿಕ ವಿರುಪಾಕ್ಷಿ, ಕಲ್ಲೇದೇವರಪುರ ಬಾಬು, ಅನಿಲ್ ಕುಮಾರ್, ಮರುಳಾರಾದ್ಯ, ತಾಸೀನ, ಬಸವರಾಜ್, ನೌಸಿಯಾ, ಸಮೀನಾ ಕೌಸರ್, ನೂರ್ ಅಹಮ್ಮದ್, ಶಿಲ್ಪ, ಡಾ.ಬಸವರಾಜ್ ಇದ್ದರು.