ನ್ಯಾಮತಿ, ಡಿ. 10 – ಲೋಕಾಯುಕ್ತ ಕಚೇರಿ ಹೆಸರಿನಲ್ಲಿ ನ್ಯಾಮತಿ ತಹಶೀಲ್ದಾರ್‌ಗೆ ಬೆದರಿಕೆ ಕರೆ ಬಂದಿದ್ದು, ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ನ್ಯಾಮತಿ ತಹಶೀಲ್ದಾರ್ ಆಗಿ ಇತ್ತೀಚಿಗೆ ಅಧಿ ಕಾರ ವಹಿಸಿಕೊಂಡಿರುವ ಎಚ್.ಬಿ. ಗೋವಿಂದಪ್ಪ ನವರ ಮೊಬೈಲ್‍ಗೆ ಕರೆ ಮಾಡಿ ಅಪರಿಚಿತ ವ್ಯಕ್ತಿ ಲೋಕಾಯುಕ್ತ ಕಚೇರಿಯ ಡಿವೈಎಸ್ಪಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಅವರ ವಿವರಗಳನ್ನು ಪಡೆದುಕೊಂಡು, `ನಿಮ್ಮ ಮೇಲೆ ಬೆಂಗಳೂರಿನ ಎಂ.ಎಸ್.ಬಿಲ್ಡಿಂಗ್‍ನಲ್ಲಿರುವ ಲೋಕಾಯುಕ್ತ ಕಚೇರಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಈ ಸಂಬಂಧ ಲೋಕಾಯುಕ್ತ ಎಸ್‍ಪಿ ಮತ್ತು ಸಿಬ್ಬಂದಿ ನೀವು ಕೆಲಸ ಮಾಡುತ್ತಿರುವ ಸ್ಥಳ ಮತ್ತು ವಾಸವಿರುವ ಮನೆಯ ಮೇಲೆ ದಾಳಿ ಮಾಡಲು ತಯಾರಿ ಮಾಡಿಕೊಂಡಿದ್ದಾರೆ’ ಎಂದು ಹೇಳಿದ್ದಾನೆ.
ನಿಮ್ಮ ಬಗ್ಗೆ ವಿಚಾರ ಮಾಡಿದಾಗ ನೀವು ಒಳ್ಳೆಯವರು ಎಂದು ತಿಳಿದು ಬಂದಿದೆ. ಮೇಲಾಧಿಕಾರಿಗಳಿಗೆ ದಾಳಿ ಮಾಡದಂತೆ ತಿಳಿಸಿದ್ದೇನೆ. ಆದ್ದರಿಂದ ನಾನು ಹೇಳಿದ ಎರಡು ನಂಬರ್‍ಗಳಿಗೆ ತಕ್ಷಣ 2 ಲಕ್ಷ ರೂ. ಕಳುಹಿಸಿ ಎಂದಿದ್ದಾನೆ. ಪದೇ ಪದೇ ಕರೆ ಮಾಡಿ ಹಣ ಹಾಕಲು ಒತ್ತಾಯ ಮಾಡಿದ. ಹಣ ಹಾಕಲು ಒಪ್ಪದಿದ್ದಾಗ `ನಿನಗೆ ಮುಂದೆ ಏನು ಮಾಡಬೇಕು ಎಂದು ಗೊತ್ತಿದೆ ಎಂದು ಪ್ರಾಣ ಬೆದರಿಕೆ ಹಾಕಿದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಾಣ ಬೆದರಿಕೆ ನೀಡಿರುವ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಎಚ್.ಬಿ. ಗೋವಿಂದಪ್ಪ ದೂರಿನಲ್ಲಿ ತಿಳಿಸಿದ್ದಾರೆ.