ದಾವಣಗೆರೆ, ಡಿ.5- ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ ಬರುವ ಜನವರಿ 6 ಹಾಗೂ 7 ರಂದು 7ನೇ ರಾಜ್ಯಮಟ್ಟದ ಮಹಿಳಾ ಸಮ್ಮೇಳನ ಹಮ್ಮಿಕೊಂಡಿರುವುದಾಗಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಿ.ಆರ್. ಅಪರ್ಣಾ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಅವರು, ಜನವರಿ 6ರಂದು ಬೆಳಿಗ್ಗೆ 10 ಗಂಟೆಗೆ ನಗರದ ಹೈಸ್ಕೂಲ್ ಮೈದಾನದಲ್ಲಿ ಬಹಿರಂಗ ಅಧಿವೇಶನ, 11 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದೆ. ಸಂಜೆ 4 ಗಂಟೆ ನಂತರ ಹಾಗು ಜನವರಿ 7ರಂದು ಪೂರ್ಣ ದಿನ ಪ್ರತಿನಿಧಿಗಳ ಸಮಾವೇಶವು ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಹೇಳಿದರು. ಸಾಹಿತಿ ರೂಪಾ ಹಸನ್ ಸಮಾವೇಶ ಉದ್ಘಾಟಿಸಲಿದ್ದಾರೆ. ಡಾ. ಪಿ. ಅನುರಾಧ ಅವರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಸ್ವಾತಂತ್ರ್ಯ ಸಿಕ್ಕು 76 ವರ್ಷಗಳಾದರೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಕಡಿಮೆಯಾಗಿಲ್ಲ. ದೌರ್ಜನ್ಯಗಳನ್ನು ತಡೆಯಬೇಕು. ಅಸಂಘಟಿತ ವಲಯದ ಮಹಿಳೆಯರಿಗೆ ಕನಿಷ್ಟ ವೇತನ ಹಾಗೂ ಭದ್ರತೆ ನೀಡುವುದು ಸೇರಿದಂತೆ, ಹಲವಾರು ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಭಾರತಿ, ಶೋಭಾ, ಮಮತಾ, ಕವಿತಾ ಇತರರಿದ್ದರು.