ಎಲ್ಲಾ ದಾನಗಳಿಗಿಂತ `ಸಮಾಧಾನ’ವೇ ಶ್ರೇಷ್ಠ ದಾನ

ಎಲ್ಲಾ ದಾನಗಳಿಗಿಂತ `ಸಮಾಧಾನ’ವೇ ಶ್ರೇಷ್ಠ ದಾನ

ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶ್ರೀಗಳು 

ಸಾಣೇಹಳ್ಳಿ, ನ.6- ಭೂದಾನ, ಬಂಗಾರ ದಾನ, ದೇಹದಾನಗಳಿಗಿಂತ   `ಸಮಾಧಾನ’ ಶ್ರೇಷ್ಠ ದಾನವಾಗಿದೆ. ಸಮಾಧಾನದಿಂದ ಸಂತೋಷ, ಸಂತೃಪ್ತಿ ಸಾಧ್ಯ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ  ಅವರು ನುಡಿದರು.

ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ ಮೂರನೇ ದಿನದ `ಚಿಂತನ ಗೋಷ್ಠಿ’ಯ   ಸಾನ್ನಿಧ್ಯ ವಹಿಸಿ  ಅವರು ಮಾತನಾಡಿದರು. 

ವ್ಯಕ್ತಿ ಕೋಪ, ತಾಪ, ಚಂಚಲತೆಗಳಿಂದ ವಿಚಲಿತನಾಗದೇ ಸಮಾಧಾನಿಯಾಗಿರಬೇಕು. ದುಡುಕಿನಿಂದ ಕೆಡುಕಾಗುತ್ತದೆ. ಆದ್ದರಿಂದ ಯಾರೂ ದುಡುಕದೇ ಸಮಾಧಾನದಿಂದಿರ ಬೇಕು. ಲೋಕದಲ್ಲಿ ಜೀವಿಸುವಾಗ ನಾಲ್ಕು ಜನ ಹೊಗಳಿದರೆ, ಇತರೆ 4 ಜನ ತೆಗಳುವವರು ಇರುವುದರಿಂದ ಕೋಪಗೊಳ್ಳದೇ ವಿವೇಕ ದಿಂದ ಉತ್ತರಿಸಬೇಕು. `ತನಗೆ ಮುನಿ ವರಿಗೆ ತಾ ಮುನಿಯಲೇಕಯ್ಯ ಅವರಿಗಾದ ಆಗೇನು? ತನಗಾದ ಚೇಗೇನು? ಮನೆಯ ಕಿಚ್ಚು, ಮನೆಯ ಸುಟ್ಟಲ್ಲದೆ ನೆರಮನೆಯ ಸುಡದು’ ಎಂಬಂತೆ ಹೊಟ್ಟೆಯ ಕಿಚ್ಚು ಒಳಗಿನ ಕುದಿತ.  ಹೊಟ್ಟೆಯ ಕಿಚ್ಚು ತನ್ನನ್ನೇ ಸುಡುವುದು. 

ದೇವಾಲಯದಲ್ಲಿನ ವಿಗ್ರಹದ ಕಲ್ಲು ಹಲವು ಉಳಿಪೆಟ್ಟನ್ನು ತಿಂದದ್ದ ರಿಂದ ಪೂಜನೀಯವಾ ಗಿದೆ. ದೇವಾಲಯದ ಇತರೆ ಕಲ್ಲುಗಳು ತುಳಿತಕ್ಕೆ ಒಳಗಾಗಿವೆ. ವಿವೇಕಿಗಳು ಸಮಾಧಾನ ದಿಂದ ಇರಬೇಕು. ಇದಕ್ಕಾಗಿ ಸಜ್ಜನರ ಸಂಘ ಮಾಡಬೇಕು ಎಂದು ತಿಳಿಸಿದರು.

ಗಣಪತಿ ನಮ್ಮ ಸಂಸ್ಕೃತಿಯಲ್ಲ. ನಮ್ಮ ಸಂಸ್ಕೃತಿ ಲಿಂಗಾಯತ ಸಂಸ್ಕೃತಿ, ಶರಣ ಸಂಸ್ಕೃತಿ. ಮಹಾನುಭಾವನೊಬ್ಬ ದೊಡ್ಡ ಲೇಖನ ಬರೆದು, ನಮ್ಮಲ್ಲಿ ಇಲ್ಲದ ಗುಣಗಳನ್ನು ಆರೋಪಿಸಿದ್ದಾನೆ. ನಾವು ಗಣಪತಿ ಉತ್ಸವಕ್ಕೆ ಹೋಗುವುದಿಲ್ಲ. ಏಕೆಂದರೆ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ಸಿದ್ಧಾಂತದಿಂದ. ನಾವು ನಮ್ಮ ಮತ್ತು ನಮ್ಮ ಸುತ್ತಲಿನವರ ಬದುಕನ್ನು ಸುಂದರಗೊಳಿಸಬೇಕು, ಅದಕ್ಕಾಗಿ ಸೂಕ್ತ ಮಾರ್ಗದರ್ಶನ ಮಾಡುತ್ತೇವೆ. ನಾಡಿನಲ್ಲಿ ಕಂದಾಚಾರದಲ್ಲಿ ಮುಳುಗಿಸುವ ಪುರೋಹಿತಶಾಹಿ ಪರಂಪರೆ ಇದೆ. ಸತ್ಯದ ಅರಿವು ಮೌಢ್ಯದ ಕೂಪದಲ್ಲಿರುವವರಿಗೆ ಅರ್ಥವಾಗುವು ದಿಲ್ಲ. ಸ್ಥಾವರ ದೇವರುಗಳು ಯಾರಿಗೂ ವರ-ಶಾಪ ಕೊಟ್ಟಿಲ್ಲ. ದಿನದ ಆರಂಭದಲ್ಲಿಯೇ ಮಾಧ್ಯಮಗಳಲ್ಲಿ ಜ್ಯೋತಿಷ್ಯ ಪಂಚಾಂಗ ಹೇಳುವಿಕೆಯ ಕಾರ್ಯ ಕ್ರಮಗಳು ಬಿತ್ತರವಾಗುತ್ತಿವೆ.  ಜ್ಯೋತಿಷ್ಯ ಪಂಚಾಂಗ ಹೇಳುವವರನ್ನು ಮಾನಸಿಕ ಭಯೋ ತ್ಪಾದಕರು ಎಂದು ನಾವು ಹಿಂದಿನಿಂದಲೂ  ಹೇಳುತ್ತಿದ್ದೇವೆ. ಆಗ ಬಾರದ ಟೀಕೆ ಈಗೇಕೆ.  ಅವರು ನಮಗೆ ಬುದ್ಧಿ ಹೇಳುವ ಅಗತ್ಯವಿಲ್ಲ. 

ಶ್ರೀ ಶಿವಕುಮಾರ ಸ್ವಾಮಿಗಳು ಮತ್ತು ಬಸವಾದಿ ಶರಣರು ನಮಗೆ ಬುದ್ಧಿ ಹೇಳಿದ್ದಾರೆ. ಕುಚೋದ್ಯದ ಪ್ರೇರಣೆಯಿಂದ ವ್ಯಕ್ತಿತ್ವ ಕಟ್ಟಿಕೊಳ್ಳಲಾಗುವುದಿಲ್ಲ. `ಶಿರ ಹೊನ್ನ ಕಳಶ’ ಎಂಬಂತೆ ಹೊಸ ವೈಚಾರಿಕ ಆಲೋಚನೆಗಳನ್ನು ಕೆಲವರು ಒಪ್ಪಿಕೊಳ್ಳುವುದಿಲ್ಲ. ಅವರಿಗೆ ಇತರರ ತಲೆ ಬೋಳಿಸುವುದೇ ಕೆಲಸವಾಗಿದೆ. 

ನಮಗೆ 2004ರಲ್ಲಿಯೇ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಕರ್ನಾಟಕದಲ್ಲಿ ಮಠಾಧೀಶರಿಗೆ ಸಂದ ಮೊದಲ ಪ್ರಶಸ್ತಿ. ರಾಜ್ಯೋತ್ಸವ ಪ್ರಶಸ್ತಿ ಮತ್ತು ಪ್ರಚಾರಕ್ಕಾಗಿ ನಾವು ಮಾತಾಡುವುದಿಲ್ಲ. ನಮಗೆ ಪ್ರಶಸ್ತಿ, ಪುರಸ್ಕಾರಗಳು ಬೇಕಿಲ್ಲ.

ಶಿಕ್ಷಕ ಬಸನಗೌಡ ಪೊಲೀಸ್ ಪಾಟೀಲ್  ‘ಸಮಾಧಾನಿಯಾಗಿರಬೇಕು’ ವಿಷಯ ಕುರಿತು ಉಪನ್ಯಾಸ ನೀಡುತ್ತಾ, ಮಾನವ ಒತ್ತಡಗಳಿಗೆ ಒಳಗಾಗಬಾರದು. ಸಮಾಧಾನದಿಂದ ಬದುಕನ್ನು ಸಾಗಿಸಬೇಕು. ತಾಳ್ಮೆಯಿಂದ ಜೀವನ ನಡೆಸಬೇಕು. ಆಗ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರು.

ಎಚ್. ಎಸ್. ನಾಗರಾಜ್‌ ಮತ್ತು ಕೆ. ಜ್ಯೋತಿ ವಚನ ಪ್ರಾರ್ಥನೆ ಮಾಡಿದರು.  ಶಿಕ್ಷಕಿ ಎನ್. ಆರ್ ಕಾವ್ಯ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.

error: Content is protected !!